ನಷ್ಟದ ಹಾದಿಯಲ್ಲಿರುವ ಸಾರ್ವಜನಿಕ ಸ್ವಾಮ್ಯದ ಕಂಪೆನಿ ಭಾರತೀಯ ಸಂಚಾರ ನಿಗಮ ಲಿಮಿಟೆಡ್‌ನ (ಬಿಎಸ್‌ಎನ್‌ಎಲ್) ಪುನರುತ್ಥಾನಕ್ಕಾಗಿ ಕೇಂದ್ರ ಸರಕಾರ ಪ್ರಯತ್ನಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ದೂರಸಂಪರ್ಕ ಕ್ಷೇತ್ರದಲ್ಲಿ ಖಾಸಗಿಯವರ ಪ್ರವೇಶದಿಂದಾಗಿ ಸ್ಪರ್ಧೆ ಮಾಡಲಾಗದೆ ಹಿಂದೆ ಬಿದ್ದಿದ್ದ ಬಿಎಸ್‌ಎನ್‌ಎಲ್ ನಷ್ಟದ ಹಾದಿ ಹಿಡಿದಿತ್ತು. ಈಗ ಬಿಎಸ್‌ಎನ್‌ಎಲ್‌ನೊಳಗೆ ಭಾರತ್ ಬ್ರಾಡ್‌ಬ್ಯಾಂಡ್ ನಿಗಮ ಲಿಮಿಟೆಡ್ ಅನ್ನು ವಿಲೀನ ಮಾಡಿ ಮತ್ತೆ ಲಾಭದ ಹಳಿಗೆ ಮರಳಿಸುವಂತೆ ಮಾಡಲು ಕೇಂದ್ರ ಸರಕಾರನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಬಿಎಸ್‌ಎನ್‌ಎಲ್‌ನ ಪುನರುತ್ಥಾನಕ್ಕಾಗಿ 1.64 ಲಕ್ಷ ಕೋಟಿ ರೂ.ನ ಪ್ಯಾಕೇಜ್‌ಗೆ ಒಪ್ಪಿಗೆ ನೀಡಲಾಗಿದೆ. ಇದರಲ್ಲಿ ಬಿಎಸ್‌ಎನ್‌ಎಲ್‌ಗೆ ಸ್ಪೆಕ್ಟ್ರಂ ಹಂಚಿಕೆ, ಬ್ಯಾಲೆನ್ಸ್ ಶೀಟ್‌ನ ಹೊರೆ ಇಳಿಕೆ ಮತ್ತು ಫೈಬರ್‌ನೆಟ್‌ವರ್ಕ್‌ನ ಜಾಲವನ್ನು ವಿಸ್ತಾರ ಮಾಡುವುದು ಸೇರಿದೆ.
ಸದ್ಯ ದೂರಸಂಪರ್ಕ ಇಲಾಖೆ, 5ಜಿ ಸ್ಪೆಕ್ಟ್ರಂನ ಹರಾಜು ಪ್ರಕ್ರಿಯೆ ನಡೆ ಸುತ್ತಿದೆ. ಮಂಗಳವಾರ ಇದು ಆರಂಭವಾಗಿದ್ದು, ಮೊದಲ ದಿನವೇ 1.45 ಲಕ್ಷ ಕೋಟಿ ರೂ.ಗಳ ವರೆಗೂ ಬಿಡ್ಡಿಂಗ್ ಆಗಿದೆ. ಹಾಗಾಗಿ ಬಿಎಸ್‌ಎನ್‌ಎಲ್‌ನ ಪುನರುತ್ಥಾನಕ್ಕಾಗಿ ಕೈಹಾಕಿರುವುದು ಉತ್ತಮ ವಿಚಾರವೇ ಆಗಿದೆ.
ಈ ಹಿಂದಿನಿಂದಲೂ ಬಿಎಸ್‌ಎನ್‌ಎಲ್‌ನ ನಷ್ಟದ ವಿಚಾರವಾಗಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಕಾದಾಟ ನಡೆದೇ ಇತ್ತು. ಖಾಸಗಿಯವರಿಗೆ ಹೆಚ್ಚಿನ ಮನ್ನಣೆ ನೀಡಿದ್ದರಿಂದಾಗಿಯೇ ಬಿಎಸ್‌ಎನ್‌ಎಲ್ ನಷ್ಟದ ಹಾದಿ ಹಿಡಿದಿದೆ ಎಂಬ ಆರೋಪವೂ ಕೇಳಿಬಂದಿತ್ತು. ವಿಪಕ್ಷಗಳ ಪ್ರಮುಖ ಟಾರ್ಗೆಟ್ ಕಡಿಮೆ ಬೆಲೆಗೆ ಡೇಟಾ ನೀಡಲು ಶುರು ಮಾಡಿದ ಜಿಯೋ ಸಂಸ್ಥೆಯೇ ಆಗಿತ್ತು. ಜಿಯೋ ಸಂಸ್ಥೆ ಮಾರುಕಟ್ಟೆ ಪ್ರವೇಶ ಮಾಡಿದ ಮೇಲೆ, ಭಾರತದಲ್ಲಿ ಮೊಬೈಲ್ ಡೇಟಾ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂಬುದಂತೂ ಸತ್ಯ. ಈಗ ಖಾಸಗಿ ಸಂಸ್ಥೆ ಯೊಂದು ಕಡಿಮೆ ಬೆಲೆಗೆ ಡೇಟಾ ನೀಡುತ್ತಿದೆ. ನಾವು ಕೊಟ್ಟರೆ ಕಷ್ಟ ಎಂಬ ಮನಃಸ್ಥಿತಿಯಿಂದಲೂ ಬಿಎಸ್‌ಎನ್‌ಎಲ್ ಹೊರಗೆ ಬರಬೇಕಾಗಿದೆ.
ಸರಕಾರವೇ ಸ್ಪೆಕ್ಟ್ರಂ ಅನ್ನು ಬಿಎಸ್‌ಎನ್‌ಎಲ್‌ಗೆ ಹಂಚಿಕೆ ಮಾಡು ತ್ತಿರುವುದರಿಂದ ಇದನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡು, ಖಾಸಗಿಯವರಿಗೆ ಉತ್ತಮ ವಾಗಿಯೇ ಸ್ಪರ್ಧೆ ನೀಡಬಹುದು. ಅಲ್ಲದೆ, ಇಂದಿಗೂ ಬಿಎಸ್‌ಎನ್‌ಎಲ್ ಕುರಿತಂತೆ ದೇಶಾದ್ಯಂತ ಒಂದು ಉತ್ತಮ ಭಾವನೆ ಇದ್ದು, ಜನರೂ ಬಳಕೆ ಮಾಡಿಯೇ ಮಾಡುತ್ತಾರೆ.
ಕೇಂದ್ರದ ಪ್ರಕಾರ, ಇದು ನಾಲ್ಕು ವರ್ಷಗಳ ವರೆಗಿನ ಪುನರುತ್ಥಾನ ಯೋಜನೆ. 43,964 ಕೋಟಿ ರೂ.ಗಳನ್ನು ನಗದು ರೂಪದಲ್ಲಿ ಮತ್ತು 1.2 ಲಕ್ಷ ಕೋಟಿ ರೂ.ಗಳನ್ನು ನಗದೇತರ ರೂಪದಲ್ಲಿ ನೀಡಲಾಗುತ್ತದೆ. ಜತೆಗೆ, ಸ್ಪೆಕ್ಟ್ರಂನ ಆಡಳಿತಾತ್ಮಕ ಹಂಚಿಕೆ ರೂಪದಲ್ಲಿ 900/1800 ಎಂಎಚ್‌ಝಡ್ ಬ್ಯಾಂಡ್ ಅನ್ನು 4 ಜಿ ಸೇವೆಗಳಿಗಾಗಿ ಬಿಎಸ್‌ಎನ್‌ಎಲ್‌ಗೆ ನೀಡಲಾಗುತ್ತಿದೆ. ಇದರ ಮೌಲ್ಯವೇ 44,993 ಕೋಟಿ ರೂ.ಗಳಾಗಿದೆ.
ಒಟ್ಟಾರೆಯಾಗಿ ಈಗ ಬಿಎಸ್‌ಎನ್‌ಎಲ್‌ನ ಪುನರುತ್ಥಾನಕ್ಕಾಗಿ ತೆಗೆದುಕೊಳ್ಳುತ್ತಿರುವ ಕ್ರಮ ಉಚಿತವಾಗಿಯೇ ಇವೆ. ಆದರೆ, ಖಾಸಗಿ ಸಂಸ್ಥೆಗಳು ಮಾರುಕಟ್ಟೆಯಲ್ಲಿ ತಮ್ಮ ನೆಲೆಯನ್ನು ಸ್ಥಾಪನೆ ಮಾಡಿಕೊಳ್ಳುವ ಮುನ್ನವೇ ಕೇಂದ್ರ ಸರಕಾರಇಂಥದ್ದೊಂದು ಕ್ರಮ ಕೈಗೊಳ್ಳಬಹುದಾಗಿತ್ತು. ಆಗ ಚೇತರಿಕೆಯ ಹಾದಿ ಒಂದಷ್ಟು ಸುಗಮವಾಗಿರುತ್ತಿತ್ತು ಎಂಬುದು ಜನರ ಅಭಿಪ್ರಾಯವಾಗಿದೆ.