Advertisement

ಕಾರ್ಕಳ: ಬಿಗಡಾಯಿಸಿದ ಬಿಎಸ್ಸೆನ್ನೆಲ್‌ ಸೇವೆ

10:16 PM Mar 01, 2020 | Sriram |

ಕಾರ್ಕಳದಲ್ಲಿ 2,500 ಸ್ಥಿರ ದೂರವಾಣಿ ಸಂಪರ್ಕವಿರುವಾಗ ಕೇವಲ 7 ಮಂದಿ ಸಿಬಂದಿ ಯಾವ ಪ್ರಮಾಣದಲ್ಲಿ ಸೇವೆ ನೀಡಲು ಸಾಧ್ಯವಿದೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಇದರಿಂದ ಖಾಸಗಿ ನೆಟ್‌ವರ್ಕ್‌ಗಳ ಸೇವೆ, ವೇಗಕ್ಕೆ ಪೈಪೋಟಿ ನೀಡುವ ಬದಲು ಕ್ರಮೇಣ ಬಿಎಸ್ಸೆನ್ನೆಲ್‌ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಆತಂಕವಿದೆ.

Advertisement

ವಿಶೇಷ ವರದಿ -ಕಾರ್ಕಳ: ಒಂದೊಮ್ಮೆ ಇಂಟರ್ನೆಟ್‌ ಸೇವೆಯಲ್ಲಿ ಕ್ರಾಂತಿಯನ್ನೇ ಮೂಡಿಸಿದ್ದ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಈಗ ವಿವಿಧ ಕಾರಣಗಳಿಂದ ಹಿಂದೆ ಬಿದ್ದಿದ್ದು ಗ್ರಾಹಕರು ಅಕ್ಷರಶಃ ಪರದಾಡುವಂತಾಗಿದೆ.

ವರ್ಷಗಟ್ಟಲೆ ಕಾದು ಸಂಪರ್ಕ ಪಡೆಯಬೇಕಾದ ಕಾಲವೊಂದಿತ್ತು. ಆದರೆ ಈಗ ಸಿಬಂದಿ ಕೊರತೆ, ಸೇವಾದಕ್ಷತೆ ಸಮಸ್ಯೆಗಳಿಂದ, ಮಾರುಕಟ್ಟೆ ಪೈಪೋಟಿ ಕಾರಣಗಳಿಂದ ಹಿಂದೆ ಬಿದ್ದಿದೆ. ಕಾರ್ಕಳ ಭಾಗದಲ್ಲಿ ಇಂಟರ್ನೆಟ್‌ಗಾಗಿ ಬಿಎಸ್‌ಎನ್‌ಎಲ್‌ ಬ್ರ್ಯಾಡ್‌ಬ್ಯಾಂಡ್‌ ಅಸ್ತಿತ್ವದಲ್ಲಿದ್ದರೂ ಸಿಬಂದಿ ಕೊರತೆಯಿಂದಾಗಿ ಸೇವೆ ಬಿಗಡಾಯಿಸಿದೆ.

ಎಷ್ಟಿದೆ ಸಂಪರ್ಕ
ಕಾರ್ಕಳ ಗ್ರಾಮಾಂತರದಲ್ಲಿ ಸುಮಾರು 1,150 ಸ್ಥಿರ ದೂರವಾಣಿ ಸಂಪರ್ಕವಿದ್ದು, 400 ಇಂಟರ್‌ನೆಟ್‌ ಸಂಪರ್ಕವಿದೆ. ಕಾರ್ಕಳ ನಗರದಲ್ಲಿ 1,350 ಸಂಪರ್ಕವಿದ್ದು, 700 ಬ್ರಾಡ್‌ಬ್ಯಾಂಡ್‌ ಕನೆಕ್ಷನ್‌ ಇದೆ. ಕಾರ್ಕಳ ತಾಲೂಕಿನಲ್ಲಿ 15 ಎಕ್ಸ್‌ಚೇಂಜ್‌ ಕಚೇರಿಗಳಿವೆ.

ಸಿಬಂದಿ ಕೊರತೆ
ಕಾರ್ಕಳ ಗ್ರಾಮಾಂತರ, ನಗರ ಸೇರಿದಂತೆ ಒಟ್ಟು 2,500 ಸ್ಥಿರ ದೂರವಾಣಿ ಸಂಪರ್ಕವಿದ್ದರೂ ಇಲ್ಲಿರುವ ಸಿಬಂದಿ ಸಂಖ್ಯೆ 7 ಮಾತ್ರ. 15 ಎಕ್ಸ್‌ಚೇಂಜ್‌ಗಳಲ್ಲಿ ಲೈನ್‌ಮ್ಯಾನ್‌ ಹುದ್ದೆಯವರೂ ಇಲ್ಲ. ಇಬ್ಬರು ಜೆಟಿಒ, ಮೂವರು ಲೈನ್‌ಮ್ಯಾನ್‌, ಇಬ್ಬರು ಕಚೇರಿ ಸಿಬಂದಿ ಕಾರ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Advertisement

28ರಲ್ಲಿ 21 ಮಂದಿ ವಿಆರ್‌ಎಸ್‌
ಬಿಎಸ್‌ಎನ್‌ಎಲ್‌ ಇತ್ತೀಚೆಗೆ ವಿಶೇಷ ಪ್ಯಾಕೇಜ್‌ನೊಂದಿಗೆ ಸ್ವಯಂ ನಿವೃತ್ತಿ ಯೋಜನೆ ಜಾರಿಗೆ ತಂದಿದೆ. ಇದರ ಪರಿಣಾಮ ಜನವರಿ ಕೊನೆಯ ವಾರಕ್ಕೆ ಹೆಚ್ಚಿನ ಸಂಖ್ಯೆಯ ಸಿಬಂದಿ ಹುದ್ದೆ ತೊರೆದರು. ಕಾರ್ಕಳ ವಿಭಾಗದಲ್ಲಿದ್ದ 28 ಸಿಬಂದಿ ಪೈಕಿ 21 ಮಂದಿ ಏಕಕಾಲದಲ್ಲಿ ವಿಆರ್‌ಎಸ್‌ ಪಡೆದರು. ಇದೀಗ ಇಲ್ಲಿ ಸಿಬಂದಿ ಸಂಖ್ಯೆ 7ಕ್ಕೆ ಇಳಿದಿದ್ದು, ಇದರ ಪರಿಣಾಮ ಗ್ರಾಹಕರ ಮೇಲಾಗಿದೆ.

ಇದೀಗ ಹೆಚ್ಚಿನ ಕಡೆಗಳಲ್ಲಿ ಇಂಟರ್ನೆಟ್‌ ಸಂಪರ್ಕಕ್ಕಾಗಿ ಮಾತ್ರ ಬಿಎಸ್‌ಎನ್‌ಎಲ್‌ ಉಳಿದುಕೊಂಡಿದೆ. ಹಿರಿಯರು ಇದ್ದ ಕಡೆಗಳಲ್ಲಿ ಮಾತನಾಡಲು ಸುಲಭ ಎಂಬ ಕಾರಣಕ್ಕೆ ಫೋನ್‌ಗಳು ಇವೆ. ಜತೆಗೆ ಸರಕಾರಿ ಕಚೇರಿಗಳು ಇತರ ಕಚೇರಿಗಳಲ್ಲಿ ಇವೆ. ಬಹುತೇಕ ಬ್ಯಾಂಕ್‌, ಸರಕಾರಿ ಕಚೇರಿಗಳು ಬಿಎಸ್ಸೆನ್ನೆಲ್‌ ಬ್ರಾಡ್‌ಬ್ಯಾಂಡ್‌ ಸಂಪರ್ಕವನ್ನೇ ಹೊಂದಿದೆ.

ಹೊಡೆತ
ಇಂಟರ್ನೆಟ್‌ ಸಂಪರ್ಕದಲ್ಲೂ ಹೆಚ್ಚಿನ ಖಾಸಗಿ ಕಂಪೆನಿಗಳು ಬಿಎಸ್‌ಎನ್‌ಎಲ್‌ಗಿಂತಲೂ ಉತ್ತಮ ಸೇವೆಯನ್ನು ಪೈಪೋಟಿಯ ದರದಲ್ಲಿ ನೀಡುತ್ತಿವೆ. ಜತೆಗೆ ದೂರು ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿವೆ. ಸಿಬಂದಿ ಕೊರತೆಯಿಂದ ಬಿಎಸ್‌ಎನ್‌ಎಲ್‌ಗೆ ಈ ಬಗ್ಗೆ ಗಮನ ಹರಿಸುವುದು ಸಾಧ್ಯವಾಗುತ್ತಿಲ್ಲ. ಇದರಿಂದ ಹಲವರು ಸಂಪರ್ಕವನ್ನೇ ರದ್ದು ಮಾಡುತ್ತಿದ್ದು ಗ್ರಾಹಕರು ಖಾಸಗಿಯತ್ತ ಮುಖಮಾಡಿದ್ದಾರೆ.

ಒಂದೇ ದಿನ 90 ಕರೆ
ಜೆಟಿಒಗೆ ಶನಿವಾರ ಒಂದೇ ದಿನ ಕಾರ್ಕಳ ಬಿಎಸ್‌ಎನ್‌ಎಲ್‌ ಕಚೇರಿಯ ಜೆಟಿಒ (ಜೂನಿಯರ್‌ ಟೆಲಿಕಾಂ ಆಫೀಸರ್‌) ಅವರಿಗೆ 90 ದೂರಿನ ಕರೆ ಬಂದಿದೆ. ಕಾರ್ಕಳದ ಜತೆಗೆ ಮೂಡುಬಿದಿರೆ ಉಸ್ತುವಾರಿ ಕೂಡ ಇವರ ಹೆಗಲಿಗೆ ಬಿದ್ದ ಪರಿಣಾಮ ಇಷ್ಟೊಂದು ಪ್ರಮಾಣದಲ್ಲಿ ಕರೆ ಬಂದಿದ್ದು, ಇವರ ಸಮಯವೆಲ್ಲ ಕರೆ ಸ್ವೀಕರಿಸುವಲ್ಲೇ ವ್ಯಯವಾಗುತ್ತಿದೆ.

ಗರಿಷ್ಠ ಸೇವೆ
ಸಿಬಂದಿ ಕೊರತೆಯಿಂದ ಬಿಎಸ್ಸೆನ್ನೆಲ್‌ ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಳಂಬವಾಗುತ್ತಿರುವುದಂತು ನಿಜ. ಇರುವ ಸಿಬಂದಿ ಗರಿಷ್ಠ ಪ್ರಮಾಣದಲ್ಲಿ ಸೇವೆ ನೀಡುತ್ತಿದ್ದೇವೆ.
-ಸುದರ್ಶನ್‌, ಜೆಟಿಒ,
ಬಿಎಸ್ಸೆನ್ನೆಲ್‌ ಕಾರ್ಕಳ ವಿಭಾಗ

ಅಸ್ತಿತ್ವ ಉಳಿಸಿಕೊಳ್ಳಬೇಕು
ಖಾಸಗಿಗೆ ಪೈಪೋಟಿ ನೀಡುವುದು ಕಷ್ಟವಿದೆ. ಬಿಎಸ್ಸೆನ್ನೆಲ್‌ ಗುತ್ತಿಗೆ ಆಧಾರದಲ್ಲಿ ಸಿಬಂದಿ ನೇಮಕ ಮಾಡಿಯಾದರೂ ತನ್ನ ಅಸ್ತಿತ್ವ ಉಳಿಸಿಕೊಳ್ಳುವಂತಾಗಬೇಕು.
-ಯೋಗೀಶ್‌ ಸಾಲ್ಯಾನ್‌,
ಬಿಎಸ್ಸೆನ್ನೆಲ್‌ ಗ್ರಾಹಕ

Advertisement

Udayavani is now on Telegram. Click here to join our channel and stay updated with the latest news.

Next