ತ್ರಿಪುರಾ: ದಕ್ಷಿಣ ತ್ರಿಪುರಾದ ಬೆಲೋನಿಯಾದ ಬೀರ್ ಸಿಂಗ್ ಔಟ್ ಪೋಸ್ಟ್ ನಲ್ಲಿರುವ ಅಂತಾರಾಷ್ಟ್ರೀಯ ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಬಿಎಸ್ ಎಫ್ ಪಡೆ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
ಸೋಮವಾರ(ಫೆ.1) ಅಂತಾರಾಷ್ಟ್ರೀಯ ಗಡಿ ಪ್ರದೇಶದ ತಡೆ ಬೇಲಿಯನ್ನು ಸುಮಾರು 7ರಿಂದ 8 ಮಂದಿ ಕತ್ತರಿಸುತ್ತಿರುವುದು ಕಂಡುಬಂದಿತ್ತು. ಅವರು ಬಾಂಗ್ಲಾದೇಶಕ್ಕೆ ಗೋ ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದರು ಎಂದು ಮೂಲಗಳು ಹೇಳಿವೆ.
ದುಷ್ಕರ್ಮಿಗಳ ಯತ್ನವನ್ನು ಬಿಎಸ್ ಎಫ್ ತಂಡ ತಡೆಯಲು ಮುಂದಾಗಿತ್ತು. ಈ ಸಂದರ್ಭದಲ್ಲಿ ಗುಂಪು ದೊಣ್ಣೆಯಿಂದ ಹಲ್ಲೆ ನಡೆಸಿದ್ದು, ಇದರ ಪರಿಣಾಮ ಬಿಎಸ್ ಎಫ್ ಯೋಧರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿತ್ತು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಭಾರೀ ಪ್ರಮಾಣದಲ್ಲಿ ಜನರು ಬಂದು ಸೇರತೊಡಗಿದ್ದರು. ತಮ್ಮ ಜೀವಕ್ಕೆ ಅಪಾಯ ಬಂದೆರಗಬಹುದು ಎಂಬ ಮುನ್ಸೂಚನೆಯಿಂದ ಸ್ವಯಂ ರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಿರುವುದಾಗಿ ವರದಿ ತಿಳಿಸಿದೆ.
ಗಾಳಿಯಲ್ಲಿ ಗುಂಡು ಹಾರಿಸಿದ ಪರಿಣಾಮ ದುಷ್ಕರ್ಮಿಗಳು ಓಡಿ ಹೋಗಿದ್ದು, ಒಬ್ಬ ದುಷ್ಕರ್ಮಿ ತ್ರಿಪುರಾದ ದೇಬಿಪುರ್ ನಿವಾಸಿ ಜಾಸಿಮ್ ಮಿಯಾ ಗಾಯಗೊಂಡಿರುವುದಾಗಿ ಬಿಎಸ್ ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಆತನನ್ನು ಕೂಡಲೇ ಋಷ್ಯಮುಖ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ ಆತ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿರುವುದಾಗಿ ವರದಿ ಹೇಳಿದೆ.