ಜಮ್ಮು : ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಪಡೆಗಳು ಭಾರೀ ಶೆಲ್ಲಿಂಗ್ ನಡೆಸಿದ ಕಾರಣ ಓರ್ವ ಬಿಎಸ್‌ಎಫ್ ಅಧಿಕಾರಿ ಮತ್ತು ಐದು ವರ್ಷದ ಓರ್ವ ಬಾಲಕಿ ಅಸುನೀಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆರು ಸೈನಿಕರು ಸೇರಿದಂತೆ ಒಟ್ಟು 11 ಮಂದಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಪೂಂಚ್ ಜಿಲ್ಲೆಯಲ್ಲಿ ಪಾಕ್ ಪಡೆಗಳು ನಡೆಸಿದ ಭಾರೀ ಶೆಲ್ಲಿಂಗ್ ಗೆ ಓರ್ವ ಬಿಎಸ್‌ಎಫ್ ಅಧಿಕಾರಿ ಅಸುನೀಗಿದರು ಎಂದು ಅದಿಕಾರಿಗಳು ತಿಳಿಸಿದರು.
ಶಾಪುರ ಉಪವಲಯದ ಗ್ರಾಮವೊಂದರಲ್ಲಿ ಪಾಕ್ ಪಡೆಗಳು ಹಾರಿಸಿದ ಶೆಲ್ ಮನೆ ಸಮೀಪ ಬಿದ್ದು ಸ್ಫೋಟಗೊಂಡ ಕಾರಣ ಮನೆಯೊಳಗಿದ್ದ ಐದು ವರ್ಷದ ಬಾಲಕಿ ಸೋಬಿಯಾ ಮೃತಪಟ್ಟಳು; ಇತರಿಬ್ಬರು ಗಾಯಗೊಂಡರು.
ಪಾಕ್ ಶೆಲ್ಲಿಂಗ್‌ನಲ್ಲಿ ಆರು ಮನೆಗಳು ಹಾನಿಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಾಕ್ ಪಡೆಗಳು ಭಾರೀ ಶಸ್ತ್ರಾಸ್ತ್ರಗಳನ್ನು ಮತ್ತು 120 ಎಂಎಂ ಮೋರ್ಟಾರ್ ಬಾಂಬ್ ಗಳನ್ನು ಪೂಂಚ್ ಎಲ್‌ಓಸಿಯಲ್ಲಿ ಬಳಸಿದ್ದಾರೆ ; ಇದರಿಂದಾಗಿ ಗ್ರಾಮಸ್ಥರು ತೀವ್ರವಾಗಿ ಭಯಗ್ರಸ್ತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ತಾಜಾ ವರದಿಗಳ ಪ್ರಕಾರ ಪಾಕ್ ಪಡೆಗಳು ಕೃಷ್ಣ ಘಾಟಿ, ಕೇರ್ಣಿ, ಮಾನ್‌ಕೋಟ್, ಗುಲ್‌ಪುರ, ದೇಗ್‌ವಾರ್ ಶಾಪುರ ಮತ್ತು ಪೂಂಚ್ ಉಪ ವಲಯಗಳಲ್ಲಿ ಶೆಲ್ ದಾಳಿ ನಡೆಸುತ್ತಿವೆ.