Advertisement

ಜೈಶ್‌ ಆತ್ಮಾಹುತಿ ದಾಳಿ ವಿಫ‌ಲಗೊಳಿಸಿದ ಸೇನೆ

08:02 AM Oct 04, 2017 | Team Udayavani |

ಶ್ರೀನಗರ: ಜಮ್ಮು-ಕಾಶ್ಮೀರದ ಶ್ರೀನಗರದ ಹೈಸೆಕ್ಯೂರಿಟಿ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಬಿಎಸ್‌ಎಫ್ ಶಿಬಿರದ ಮೇಲೆ ದಾಳಿ ನಡೆಸಿ, ವಿಧ್ವಂಸಕ ಕೃತ್ಯವೆಸಗಲು ಮುಂದಾಗಿದ್ದ ಪಾಕಿಸ್ತಾನ ಮೂಲದ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಯತ್ನವನ್ನು ಭಾರತೀಯ ಸೇನೆ ವಿಫ‌ಲಗೊಳಿಸಿದೆ. ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಬಿಎಸ್‌ಎಫ್ನ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌
ಹುತಾತ್ಮರಾಗಿ ದ್ದಾರೆ. ಇದೇ ವೇಳೆ, ಕಾರ್ಯಾಚರಣೆಯನ್ನು ಸೇನೆ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಎಲ್ಲ ಮೂವರು ಉಗ್ರರನ್ನೂ ಹತ್ಯೆಗೈಯ್ಯಲಾಗಿದೆ.

Advertisement

ಪಾಕ್‌ ಸೇನೆ ಇಬ್ಬರು ಮಕ್ಕಳನ್ನು ಬಲಿತೆಗೆದು ಕೊಂಡ ಮಾರನೇ ದಿನವೇ ಈ ಘಟನೆ ನಡೆದಿದೆ. ಸೋಮವಾರ ಎಲ್‌ಒಸಿಯ ಎರಡು ವಲಯಗಳಲ್ಲಿ ಒಳನುಸುಳಲು ಉಗ್ರರು ಯತ್ನಿಸಿದ್ದು, ಎಲ್ಲ ಐವರು ಉಗ್ರರನ್ನೂ ಸೇನೆಯು ಸದೆಬಡಿದಿತ್ತು. ಮಂಗಳವಾರ ಬೆಳಗ್ಗೆ ಜೈಶ್‌ ಸಂಘಟನೆಯ ಮೂವರು ಉಗ್ರರು, ವಿಮಾನನಿಲ್ದಾಣದ ಸಮೀಪ ದಲ್ಲೇ ಇರುವ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಯ ಶಿಬಿರದ ಮೇಲೆ ದಾಳಿಗೆ ಯತ್ನಿಸಿದ್ದು, ತಕ್ಷಣ ಎಚ್ಚೆತ್ತ ಯೋಧರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅತಿದೊಡ್ಡ ದಾಳಿಯನ್ನು ತಡೆದಿದ್ದಾರೆ.

ಮೊದಲೇ ಸಿಕ್ಕಿತ್ತು ಮಾಹಿತಿ: ಜೈಶ್‌ನ “ನೂರಾ ತ್ರಾಲಿ’ ಎಂಬ ಹೆಸರಿನ ಉಗ್ರರು ನಗರದೊಳಕ್ಕೆ ಆತ್ಮಾಹುತಿ ದಳವೊಂದನ್ನು ತಂದಿದ್ದಾರೆ ಎಂದು ಗುಪ್ತಚರ ಇಲಾಖೆಯು ಮಾಹಿತಿ ನೀಡಿತ್ತು.  ಮಂಗಳವಾರ ಬೆಳಗ್ಗೆ ಮೂವರು ಉಗ್ರರು ಏಕಾಏಕಿ ಗೋಗೋಲ್ಯಾಂಡ್‌ನ‌ಲ್ಲಿರುವ ಬಿಎಸ್‌ ಎಫ್ ಪ್ರಧಾನ ಕಚೇರಿ ಮೇಲೆ ದಾಳಿ ನಡೆಸಿದರು. ವಾಯುಪಡೆಯ ಹಳೆಯ ವಾಯು ನೆಲೆಯೂ ಇದೇ ಪ್ರದೇಶದಲ್ಲಿದೆ. ಹಾನಿಗೊಂಡಿದ್ದ ಗೋಡೆಯ ಮೂಲಕ ಒಳ ಪ್ರವೇಶಿಸಿದ ಉಗ್ರರು, ಎಲ್ಲ ದಿಕ್ಕುಗಳಿಂದಲೂ ಗುಂಡಿನ ಮಳೆಗರೆದರು. ಆರಂಭಿಕ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡರು. ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ ಬಿ.ಕೆ. ಯಾದವ್‌ ಅವರ ಮೃತದೇಹವು ಕಾರ್ಯಾಚರಣೆಯ ಬಳಿಕ ನಡೆದ ಶೋಧ ಕಾರ್ಯದ ವೇಳೆ ಪತ್ತೆಯಾಯಿತು ಎಂದು ರಾಜ್ಯ ಡಿಜಿಪಿ ಎಸ್‌.ಪಿ.ವೇದ್‌ ತಿಳಿಸಿದ್ದಾರೆ. ಪಾಕ್‌ನ ಜೈಶ್‌ ಉಗ್ರ ಸಂಘಟನೆಯೇ ದಾಳಿ ಹೊಣೆ ಹೊತ್ತುಕೊಂಡಿದೆ.

ವಿಮಾನ ಹಾರಾಟ ಆರಂಭ: ದಾಳಿ ಹಿನ್ನೆಲೆಯಲ್ಲಿ ಬೆಳಗ್ಗೆ ಸುಮಾರು 3 ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲಿನ ಎಲ್ಲ ಕಾರ್ಯ ಚಟುವಟಿಕೆಗಳನ್ನೂ ಸ್ಥಗಿತ ಗೊಳಿಸಲಾಯಿತು. ಕಾರ್ಯಾಚರಣೆ ಮುಗಿದ ಹಿನ್ನೆಲೆಯಲ್ಲಿ 10 ಗಂಟೆಯ ಬಳಿಕ ವಿಮಾನ ಸಂಚಾರ ಪುನಾರಂಭಗೊಂಡಿತು ಎಂದು ಶ್ರೀನಗರದ ವಿಮಾನಯಾನ ಪ್ರಾಧಿಕಾರದ ನಿರ್ದೇಶಕ ಶರದ್‌ ಕುಮಾರ್‌ ಹೇಳಿದ್ದಾರೆ.

ಪ್ರಧಾನಿ ಮೋದಿಯನ್ನು “ಭಯೋತ್ಪಾದಕ’ ಎಂದ ಪಾಕಿಸ್ತಾನ ತನ್ನ ನೆಲದಲ್ಲಿ ಉಗ್ರರನ್ನು ಪೋಷಿಸಿ, ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ರೇರಣೆ ನೀಡುತ್ತಿರುವ ಪಾಕಿಸ್ತಾನವು ಇದೀಗ ಭಾರತವನ್ನು ದೂಷಿಸುವ ಭರದಲ್ಲಿ ಅತ್ಯಂತ ಕೀಳುಮಟ್ಟದ ಹೇಳಿಕೆಯನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು “ಭಯೋತ್ಪಾದಕ’ ಎಂದು ಪಾಕ್‌ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಸಂಬೋಧಿಸಿದ್ದಾರೆ. ಜಿಯೋ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಸಿಫ್ ವಿಶ್ವಸಂಸ್ಥೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ನುಡಿದ ಮಾತುಗಳನ್ನು ಪ್ರಸ್ತಾಪಿಸುತ್ತಾ, “ಸುಷ್ಮಾ ಅವರು ಪಾಕಿಸ್ತಾನದ ಮೇಲೆ ಆರೋಪ ಹೊರಿಸುವ ಅಗತ್ಯವೇ ಇರಲಿಲ್ಲ. ಏಕೆಂದರೆ, ಅವರ ದೇಶವನ್ನು ಒಬ್ಬ ಭಯೋತ್ಪಾದಕನೇ ಆಳುತ್ತಿದ್ದಾನೆ. ಉಗ್ರನನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ ಆ ದೇಶದ ಬಗ್ಗೆ ಹೇಳಲಿಕ್ಕೆ ಏನಿದೆ’ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಗೋರಕ್ಷಣೆಯ ಹೆಸರಲ್ಲಿ ಮುಸ್ಲಿಮರು ಮತ್ತು ದಲಿತರನ್ನು ಕೊಲ್ಲಲಾಗುತ್ತಿದೆ. ಆರೆಸ್ಸೆಸ್‌ ಕೂಡ ಭಯೋತ್ಪಾದನಾ ಸಂಘಟನೆಯಾಗಿದ್ದು, ಬಿಜೆಪಿ ಅದರ ಭಾಗವಾಗಿದೆ ಎಂದಿದ್ದಾರೆ ಆಸಿಫ್. 

Advertisement

ಸೇನಾನೆಲೆಗಳ ಮೇಲಿನ ದಾಳಿ
2016, ನ.29- ಜಮ್ಮು ನಗರದ ಹೊರವಲಯ ದಲ್ಲಿರುವ ನಗರೋಟಾ ಸೇನಾನೆಲೆ ಮೇಲೆ ದಾಳಿ- ಇಬ್ಬರು ಅಧಿಕಾರಿಗಳು ಸೇರಿ 7 ಯೋಧರು ಹುತಾತ್ಮ

2016, ಅ.6- ಹಂದ್ವಾರಾದ ರಾಷ್ಟ್ರೀಯ ರೈಫ‌ಲ್ಸ್‌ ಶಿಬಿರದ ಮೇಲೆ ಉಗ್ರರ ದಾಳಿ- ಮೂವರು ಉಗ್ರರ ಹತ್ಯೆಗೈದ ಸೇನಾಪಡೆ. ಒಬ್ಬ ಯೋಧ ಹುತಾತ್ಮ

2016, ಸೆ.18- ಬಾರಾಮುಲ್ಲಾ ಜಿಲ್ಲೆಯ ಉರಿ ಸೇನಾನೆಲೆ ಮೇಲೆ ಫಿದಾಯೀನ್‌ ದಾಳಿ- 17 ಯೋಧರು ಬಲಿ. ನಾಲ್ವರು
ಉಗ್ರರ ಹತ್ಯೆ

2016, ಜ.1-2- ಪಠಾಣ್‌ ಕೋಟ್‌ನ ವಾಯುನೆಲೆಯಲ್ಲಿ ಪಾಕ್‌ ಉಗ್ರರ ದಾಳಿ- 3 ಯೋಧರು ಹುತಾತ್ಮ. 6 ದಾಳಿಕೋರರ ಹತ್ಯೆ 

ನಾನು ಸಿಆರ್‌ಪಿಎಫ್ ಮತ್ತು ಬಿಎಸ್‌ಎಫ್ ಡಿಜಿ ಜತೆ ಮಾತುಕತೆ ನಡೆಸಿದ್ದೇನೆ. ಸೇನಾ ಶಿಬಿರದ ಮೇಲೆ ದಾಳಿ ನಡೆಸುವ ಉಗ್ರರ ಯತ್ನವನ್ನು ವಿಫ‌ಲಗೊಳಿಸುವಲ್ಲಿ ಯಶಸ್ವಿಯಾದ ಭದ್ರತಾ ಪಡೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ.
 ●ರಾಜನಾಥ್‌ ಸಿಂಗ್‌, ಕೇಂದ್ರ ಗೃಹ ಸಚಿವ

ಕೇಂದ್ರ ಸರ್ಕಾರವು ರಾಷ್ಟ್ರೀಯ ಭದ್ರತೆಯೊಂದಿಗೆ ಹೇಗೆ ರಾಜಿ ಮಾಡಿಕೊಂಡಿದೆ ಎನ್ನುವುದಕ್ಕೆ ಸೋಮ ವಾರದ ದಾಳಿಯೇ ಸಾಕ್ಷಿ. ಮೋದಿಜೀ ಮತ್ತು ಅವರ ಸರ್ಕಾರ ಏನು ಮಾಡು ತ್ತಿದೆ? ಪಾಕ್‌ನ ಭಯೋತ್ಪಾದನೆಯನ್ನು ತಡೆಯಲು ಸರ್ಕಾರ ಹೊಸ ನೀತಿ ಜಾರಿ ಮಾಡುವುದಾದರೂ ಯಾವಾಗ?
 ●ರಣದೀಪ್‌ ಸುಜೇìವಾಲಾ, ಕಾಂಗ್ರೆಸ್‌ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next