ಮುಂಬಯಿ : ಡಾಲರ್ ಎದುರು ರೂಪಾಯಿ ಚೇತರಿಕೆ, ಕಚ್ಚಾ ತೈಲ ಬೆಲೆ ಇಳಿಕೆ, ದೇಶೀಯ ಹೂಡಿಕೆ ಸಂಸ್ಥೆಗಳಿಂದ ಮುಂಚೂಣಿ ಶೇರುಗಳ ಖರೀದಿ – ಇವೇ ಮೊದಲಾದ ಧನಾತ್ಮಕ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆ ಇಂದು 718.09 ಅಂಕಗಳ ಭರ್ಜರಿ ಏರಿಕೆಯನ್ನು ಕಂಡು, ದಿನದ ವಹಿವಾಟನ್ನು 34,067.40 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆ ಯ ನಿಫ್ಟಿ ಸೂಚ್ಯಂಕ 220.85 ಅಂಕಗಳ ಉತ್ತಮ ಏರಿಕೆಯನ್ನು ದಾಖಲಿಸಿ 10,250 ಅಂಕಗಳ ಮಟ್ಟವನ್ನು ಪುನರ್ ಸಂಪಾದಿಸಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,753 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು, 1,816 ಶೇರುಗಳು ಮುನ್ನಡೆ ಕಂಡವು, 767 ಶೇರುಗಳು ಹಿನ್ನಡೆಗೆ ಗುರಿಯಾದವು; 170 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಎರಡು ದಿನಗಳ ನಿರಂತರ ಸೋಲಿನಿಂದ ಕಂಗೆಟ್ಟಿದ್ದ ಮುಂಬಯಿ ಶೇರು ಪೇಟೆಗೆ ಇಂದು ಸೋಮವಾರ ಡಾಲರ್ ಎದುರು ರೂಪಾಯಿ ಚೇತರಿಕೆ ವಿಶೇಷ ಉತ್ಸಾಹ ತುಂಬಿತು.
ಮೊನ್ನೆ ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 340.78 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಇಂದು ಇನ್‌ಫ್ರಾ, ಆಟೋ ರಂಗದಲ್ಲಿ ಉತ್ತಮ ಖರೀದಿ ವಹಿವಾಟು ನಡೆಯಿತು.
ಡಾಲರ್ ಎದುರಿನ ಇಂದಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 14 ಪೈಸೆಗಳ ಚೇತರಿಕೆಯನ್ನು ದಾಖಲಿಸಿ 73.33 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.