ಮುಂಬಯಿ : ನಿರೀಕ್ಷೆಗಿಂತ ಉತ್ತಮ ತ್ತೈಮಾಸಿಕ ಫಲಿತಾಂಶಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಮಾರುಕಟ್ಟೆ ಗರಿಗೆದರಿದ್ದು ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 50 ಅಂಕಗಳ ಮುನ್ನಡೆಯನ್ನು ಸಾಧಿಸಿದೆ. ಆದರೆ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಮತ್ತೆ ಐತಿಹಾಸಿಕ 10,000 ಮಟ್ಟವನ್ನು ದಾಟಲು ವಿಫಲವಾಗಿದೆ.
ಜುಲೈ ತಿಂಗಳ ವಾಯಿದೆ ವಹಿವಾಟು ನಾಳೆ ಕೊನೆಗೊಳ್ಳುವುದರಿಂದ ಅದಕ್ಕೆ ಮುನ್ನ ತಮ್ಮ ಶಾರ್ಟ್ ಪೊಸಿಶನಿಂಗ್ ಕವರ್ ಮಾಡುತ್ತಿರುವ ವಹಿವಾಟುದಾರರು ಶೇರು ಖರೀದಿಗೆ ಮುಂದಾಗಿರುವುದೇ ಇಂದಿನ ತೇಜಿಗೆ ಕಾರಣವೆನಿಸಿತು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 50.23 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 32,278.50 ಅಂಕಗಳ ಮಟ್ಟದಲ್ಲೂ, ನಿಫ್ಟಿ 17.90 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 9,982.45 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್, ವೇದಾಂತ, ಆ್ಯಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ, ರಿಲಯನ್ಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ವೇದಾಂತ, ಟಾಟಾ ಸ್ಟೀಲ್, ಈಶರ್ ಮೋಟರ್, ಗೇಲ್ ಮತ್ತು ಮಹೀಂದ್ರ ವಿಜೃಂಭಿಸಿದವು. ಟಾಪ್ ಲೂಸರ್‌ಗಳಾಗಿ ಐಡಿಯಾ ಸೆಲ್ಯುಲರ್, ಏಶ್ಯನ್ ಪೇಂಟ್, ಎಕ್ಸಿಸ್ ಬ್ಯಾಂಕ್, ಝೀ ಎಂಟರ್‌ಟೇನ್‌ಮೆಂಟ್, ಎಸಿಸಿ ಶೇರುಗಳು ಕಾಣಿಸಿಕೊಂಡವು.