ಮುಂಬಯಿ : ಸ್ಥೂಲ ಆರ್ಥಿಕಾಭಿವೃದ್ಧಿ ಅಂಕಿ ಅಂಶಗಳು ಆಶಾದಾಯಕವಾಗಿ ಕಂಡು ಬಂದಿರುವ ಕಾರಣ ಮತ್ತು ಟೆಲಿಕಾಂ ಅನುತ್ಪಾದಕ ಆಸ್ತಿಗಳು ಟೆಲಿಕಾಂ ವಹಿವಾಟುಗಳನ್ನು ಅನುಸರಿಸಿ ಇತ್ಯರ್ಥವಾಗುವ ಲಕ್ಷಣಗಳು ತೋರಿ ಬಂದಿರುವ ಕಾರಣ ಮುಂಬಯಿ ಶೇರು ಪೇಟೆಯಲ್ಲಿಂದು ವಸ್ತುತಃ ದೀಪಾವಳಿ ಹಬ್ಬದ ವಾತಾವರಣ ಕಂಡು ಬಂತು. ಪರಿಣಾಮವಾಗಿ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು ನಿರಂತರ ಎರಡನೇ ದಿನದಲ್ಲಿ 250.47 ಅಂಕಗಳ ಉತ್ತಮ ಏರಿಕೆಯೊಂದಿಗೆ 32,432.69 ಅಂಕಗಳ ಮಟ್ಟಕ್ಕೇರಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 71.10 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,167.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸುವ ಮೂಲಕ ದಾಖಲೆಯ ಎತ್ತರವನ್ನು ತಲುಪಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,431 ಶೇರುಗಳು ಹಿನ್ನಡೆಗೆ ಗುರಿಯಾದರೆ 1,293 ಶೇರುಗಳು ಮುನ್ನಡೆ ಭಾಗ್ಯವನ್ನು ಕಂಡವು.
ಇಂದಿನ ವಹಿವಾಟಿನಲ್ಲಿ ಬ್ಯಾಂಕ್ ನಿಫ್ಟಿ 327.90 ಅಂಕಗಳ ಏರಿಕೆಯನ್ನು ಸಾಧಿಸಿ 24,689.20 ಅಂಕಗಳ ಮಟ್ಟವನ್ನು ತಲುಪಿರುವುದು ಗಮನಾರ್ಹವಾಗಿದೆ.
ಇಂದಿನ ಟಾಪ್ ಗೇನರ್‌ಗಳು : ಭಾರ್ತಿ ಏರ್‌ಟೆಲ್, ಐಡಿಯಾ ಸೆಲ್ಯುಲರ್, ಭಾರ್ತಿ ಇನ್‌ಫ್ರಾಟೆಲ್, ಟಾಟಾ ಸ್ಟೀಲ್, ಕೋಟಕ್ ಮಹೀಂದ್ರ; ಟಾಪ್ ಲೂಸರ್‌ಗಳು : ಗೇಲ್, ಝೀ ಎಂಟರ್‌ಟೇನ್‌ಮೆಂಟ್, ಡಾ. ರೆಡ್ಡಿ, ಮಹೀಂದ್ರ ಮತ್ತು ಸನ್ ಫಾರ್ಮಾ.