ಮುಂಬಯಿ : ಕಳೆದ ವಾರದ ಐದೂ ದಿನಗಳ ವಹಿವಾಟಿನಲ್ಲಿ 1,111 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 191 ಅಂಕಗಳ ಉತ್ತಮ ಜಿಗಿತವನ್ನು ಸಾಧಿಸಿತು.
ಕಳೆದ ಜೂನ್‌ನಲ್ಲಿ ದೇಶದಲ್ಲಿನ ಕೈಗಾರಿಕಾ ಉತ್ಪಾನೆ ಕುಗ್ಗಿರುವ ಬಗ್ಗೆ ಪ್ರಕಟಗೊಂಡಿರುವ ಅಂಕಿ ಅಂಶಗಳನ್ನು ಕಡೆಗಣಿಸಿರುವ ಶೇರು ಪೇಟೆಯಲ್ಲಿ ಇಂದು ಸೋಮವಾರ ಹೂಡಿಕೆದಾರರು ಮತ್ತು ವಹಿವಾಟುದಾರರು ಕಳೆದ ವಾರ ಹೊಡೆದು ನೆಲಕ್ಕುರುಳಿಸಲ್ಪಟ್ಟ ಶೇರುಗಳನ್ನು ಖರೀದಿಸುವ ಆಸಕ್ತಿ ತೋರಿದರು.
ಅಮೆರಿಕ ಶೇರು ಮಾರುಕಟ್ಟೆ ಕಳೆದ ವಾರಾಂತ್ಯ ಉತ್ತಮ ಜಿಗಿತ ದಾಖಲಿಸಿರುವುದು ಕೂಡ ಮುಂಬಯಿ ಶೇರು ಪೇಟೆಗೆ ಇಂದು ಹೊಸ ಉತ್ಸಾಹ, ಚೈತನ್ಯವನ್ನು ತುಂಬಿತು. ಹಾಗಿದ್ದರೂ ಶಾರ್ಟ್ ಕವರಿಂಗ್ ಕೂಡ ಇಂದು ಶೇರು ಜಿಗಿತಕ್ಕೆ ಕಾರಣವಾಯಿತು.
ಇಂದು ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 227.38 ಅಂಕಗಳ ಮುನ್ನಡೆಯೊಂದಿಗೆ 31,441.38 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9,784.00 ಅಂಕಗಳ ಮಟ್ಟದಲ್ಲೂ ವಹಿವಾಟು ನಿರತವಾಗಿತ್ತು.
ಸನ್ ಫಾರ್ಮಾ, ಎಸ್‌ಬಿಐ, ಎಚ್‌ಡಿಎಫ್ಸಿ, ಟಾಟಾ ಸ್ಟೀಲ್, ವೇದಾಂತ ಶೇರುಗಳು ಇಂದು ಅತ್ಯಂತ ಕ್ರಿಯಾಶೀಲವಾಗಿದ್ದವು.
ಸಿಪ್ಲಾ, ಅದಾನಿ ಪೋರ್ಟ್, ಟಾಟಾ ಸ್ಟೀಲ್, ಈಶರ್ ಮೋಟರ್, ಎಚ್ ಡಿ ಎಫ್ ಸಿ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು; ಬಿಪಿಸಿಎಲ್, ಬಾಶ್, ಡಾ. ರೆಡ್ಡಿ, ಲಾರ್ಸನ್, ಇನ್‌ಫೋಸಿಸ್ ಶೇರುಗಳು ಟಾಪ್ ಲೂಸರ್ ಎನಿಸಿಕೊಂಡವು.