ಮುಂಬಯಿ : ಅಮೆರಿಕದ ವಾಲ್ ಸ್ಟ್ರೀಟ್ ಕುಸಿತವನ್ನು ಅನುಸರಿಸಿ ಏಶ್ಯನ್ ಶೇರು ಪೇಟೆಗಳಲ್ಲಿ ದೌರ್ಬಲ್ಯ ಕಂಡು ಬಂದ ಪ್ರಯುಕ್ತ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 301 ಅಂಕಗಳ ನಷ್ಟಕ್ಕೆ ಗುರಿಯಾಯಿತು. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದದ್ದು ಕೂಡ ಶೇರು ಮಾರುಕಟ್ಟೆಗೆ ಅಪಥ್ಯವಾಯಿತು.
ಬೆಳಗ್ಗೆ 11 ಗಂಟೆಯ ಸುಮಾರಿಗೆ ಸೆನ್ಸೆಕ್ಸ್ 442.15 ಅಂಕಗಳ ನಷ್ಟದೊಂದಿಗೆ 33,591.81 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 132.80 ಅಂಕಗಳ ನಷ್ಟದೊ,ದಿಗೆ 10,092.00 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು 19 ಪೈಸೆಗಳ ಕುಸಿತವನ್ನು ಕಂಡು 73.35 ರೂ. ಮಟ್ಟಕ್ಕೆ ಇಳಿಯಿತು. ನಿನ್ನೆ ಬುಧವಾರದ ವಹಿವಾಟಿನಲ್ಲಿ ಅಮೆರಿಕದ ಶೇರು ಪೇಟೆ ಭಾರೀ ಕುಸಿತವನ್ನು ಕಂಡಿತ್ತು.
ಇಂದಿನ ವಹಿವಾಟಿನಲ್ಲಿ ಭಾರ್ತಿ ಏರ್‌ಟೆಲ್, ಇಂಡಸ್‌ಇಂಡ್ ಬ್ಯಾಂಕ್, ಇನ್‌ಫೋಸಿಸ್, ವೇದಾಂತ, ಆರ್‌ಐಎಲ್, ಎಚ್‌ಯುಎಲ್, ಎಲ್ ಆ್ಯಂಡ್ ಟಿ, ಅದಾನಿ, ಟಾಟಾ ಮೋಟರ್, ಏಶ್ಯನ್ ಪೇಂಟ್, ಎಕ್ಸಿಸ್ ಬ್ಯಾಂಕ್, ಬಜಾಜ್ ಆಟೋ, ಎಚ್ ಡಿ ಎಫ್ ಸಿ, ಪವರ್ ಗ್ರಿಡ್, ಎಸ್ ಬ್ಯಾಂಕ್ ಮತ್ತು ಟಾಟಾ ಸ್ಟೀಲ್ ಶೇರುಗಳು ಶೇ.3.71 ರಷ್ಟು ಕುಸಿದವು.
ಹಾಗಿದ್ದರೂ ವಿಪ್ರೋ ಶೇ.1.73 ಏರಿತು. ವಿಪ್ರೋ ಎರಡನೇ ತ್ತೈಮಾಸಿಕ ಫಲಿತಾಂಶ ನಿರೀಕ್ಷೆಗೂ ಮೀರಿ ಉತ್ತಮವಿದ್ದದ್ದೇ ಇದಕ್ಕೆ ಕಾರಣವಾಯಿತು.