ಮುಂಬಯಿ : ಡಾಲರ್ ಎದುರು ರೂಪಾಯಿ ಇಂದು ಮತ್ತೆ ಹೊಸ ಸಾರ್ವಕಾಲಿಕ ತಳಮಟ್ಟವನ್ನು ಕಂಡಿರುವುದು, ತೈಲ ಬೆಲೆಗಳು ಗಗನ ಮುಖೀಯಾಗಿರುವುದು, ಜಾಗತಿಕ ಶೇರು ಪೇಟೆಗಳಲ್ಲಿ ಅಸ್ಥಿರತೆ ತೋರಿ ಬಂದಿರುವುದು – ಇವೇ ಮೊದಲಾದ ಕಾರಣಕ್ಕೆ ನಿರಂತರ ಕುಸಿತವನ್ನು ಕಾಣುತ್ತಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರ 806.47 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 35,169.16 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 259 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,599.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಈಶರ್ ಮೋಟರ್, ಹೀರೋ ಮೋಟೋ ಕಾರ್ಪ್ ಮತ್ತು ರಿಲಯನ್ಸ್ ಶೇರುಗಳು ಇಂದು ಭಾರೀ ನಷ್ಟ ಅನುಭವಿಸಿದವು. ನಿಫ್ಟಿ ಶೇರುಗಳು ಇಂದು ಶೇ.6ರಿಂದ 9ರ ಕುಸಿತವನ್ನು ಅನುಭವಿಸಿದವು.
ಏರುತ್ತಿರುವ ಕಚ್ಚಾ ತೈಲ ಬೆಲೆಯಿಂದ ಜನಸಾಮಾನ್ಯರಿಗೆ ಸ್ವಲ್ಪ ಮಟ್ಟಿನ ರಿಲೀಫ್ ನೀಡುವ ಸಲುವಾಗಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ಅವರಿಂದು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 1.50 ರೂ. ಇಳಿಸಿದರು. ಇದನ್ನು ಅನುಸರಿಸಿ ಈಗಿನ್ನು ತೈಲ ಮಾರಾಟ ಕಂಪೆನಿಗಳು ತಲಾ ಲೀಟರ್ ಮೇಲೆ 1 ರೂ ಅಬಕಾರಿ ಸುಂಕವನ್ನು ಇಳಿಸಲಿವೆ.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,802 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು. ಈ ಪೈಕಿ ಕೇವಲ 775 ಶೇರುಗಳು ಮುನ್ನಡೆ ಕಂಡವು, 1,889 ಶೇರುಗಳು ಹಿನ್ನಡೆಗೆ ಗುರಿಯಾದವು; 138 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.