ಮುಂಬಯಿ : ಮುಂಬಯಿ ಶೇರು ಪೇಟೆಯಲ್ಲಿ ಇಂದು ವಸ್ತುತಃ ಹಾವು – ಏಣಿ ಆಟವೇ ದಿನಪೂರ್ತಿ ವಿಜೃಂಭಿಸಿತು. ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 267 ಅಂಕಗಳ ಸೊಗಸಾದ ಏರಿಕೆಯನ್ನು ದಾಖಲಿಸಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್, ದಿನಾಂತ್ಯಕ್ಕೆ ಬೆಳಗ್ಗಿನ ತನ್ನ ಎಲ್ಲ ಗಳಿಕೆಯನ್ನು ಬಿಟ್ಟುಕೊಟ್ಟು ಅಂತಿಮವಾಗಿ 95 ಅಂಕಗಳ ಕುಸಿತಕ್ಕೆ ಗುರಿಯಾಗಿ ದಿನದ ವಹಿವಾಟನ್ನು 29,701.19 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆ ಬೆಳಗ್ಗೆ 9,200 ಅಂಕಗಳ ಮಟ್ಟವನ್ನು ಮರಳಿ ಸಂಪಾದಿಸಿದ ಸಂಭ್ರಮದಲ್ಲಿ ಓಲಾಡಿತ್ತು. ಆದರೆ ದಿನಾಂತ್ಯಕ್ಕೆ ಆ ಸಂಭ್ರಮ ಸಂಪೂರ್ಣವಾಗಿ ಕೊಚ್ಚಿ ಹೋಗಿ 34.15 ಅಂಕಗಳ ನಷ್ಟದೊಂದಿಗೆ ನಿಫ್ಟಿ 9,105.15 ಅಂಕಗಳ ಮಟ್ಟಕ್ಕೆ ಕುಸಿಯಿತು.
ಸೆನ್ಸೆಕ್ಸ್ ಮತ್ತು ನಿಫ್ಟಿ ನಿರಂತರ ನಾಲ್ಕನೇ ದಿನ ನಷ್ಟಕ್ಕೆ ಗುರಿಯಾಗಿರುವುದಕ್ಕೆ ಮುಖ್ಯ ಕಾರಣವೇ ಹೂಡಿಕೆದಾರರು ಮತ್ತು ವಹಿವಾಟುದಾರರು ಈಚಿನ ಲಾಭಗಳನ್ನು ನಗದೀಕರಿಸಲು ಮುಂದಾದದ್ದು.
ಇಂದಿನ ನಿಫ್ಟಿ ಟಾಪ್ ಗೇನರ್‌ಗಳು : ಆರಬಿಂದೋ ಫಾರ್ಮಾ, ಎನ್‌ಟಿಪಿಸಿ, ಹಿಂಡಾಲ್ಕೊ, ಎಚ್ ಡಿ ಎಫ್ ಸಿ ಬ್ಯಾಂಕ್, ಮಾರುತಿ ಸುಜುಕಿ.
ಟಾಪ್ ಲೂಸರ್‌ಗಳು : ಟಾಟಾ ಸ್ಟೀಲ್, ಅಂಬುಜಾ ಸಿಮೆಂಟ್ಸ್, ಕೋಲ್ ಇಂಡಿಯಾ, ಈಶರ್ ಮೋಟರ್, ಭಾರ್ತಿ ಇನ್‌ಫ್ರಾಟೆಲ್.