ಮುಂಬಯಿ : ನಿನ್ನೆಯ ಭಾರೀ ಕುಸಿತದಿಂದ ಫೀನಿಕ್ಸ್ ಹಕ್ಕಿಯಂತೆ ಎದ್ದು ಬಂದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಶುಕ್ರವಾರದ ವಹಿವಾಟಿನಲ್ಲಿ 391 ಅಂಕಗಳ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು 37,556.16 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ವೇಳೆ ಹೊಸ ಸಾರ್ವಕಾಲಿಕ ಜೀವಮಾನದ ಎತ್ತರವನ್ನು ತಲುಪುವ ಸಾಧನೆ ಮಾಡಿದ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ದಿನದ ವಹಿವಾಟನ್ನು 116.10 ಅಂಕಗಳ ಜಿಗಿತದೊಂದಿಗೆ 11,360.80 ಅಂಕಗಳ ಹೊಸ ದಾಖಲೆಯ ಮಟ್ಟದಲ್ಲಿ ಕೊನೆಗೊಳಿಸಿತು. ಜುಲೈ 31ರಂದು ತಾನು ದಾಖಲಿಸಿದ್ದ 11,356.50 ಅಂಕಗಳ ದಾಖಲೆಯ ಎತ್ತರದ ಮಟ್ಟವನ್ನು ನಿಫ್ಟಿ ಇಂದು ದಾಟುವಲ್ಲಿ ಯಶಸ್ವಿಯಾಯಿತು.
ಆರ್‌ಬಿಐ ನಿನ್ನೆ ರಿಪೋ ಮತ್ತು ರಿವರ್ಸ್ ರಿಪೋ ದರಗಳನ್ನು ಶೇ.0.25ರಷ್ಟು ಏರಿಸಿದ ಕಾರಣಕ್ಕೆ ಮುದುಡಿದ್ದ ಸೆನ್ಸೆಕ್ಸ್ ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಒಟ್ಟು 441.42 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ಸಾಪ್ತಾಹಿಕ ನೆಲೆಯಲ್ಲಿ ಸೆನ್ಸೆಕ್ಸ್ ನಿರಂತರ ಎರಡನೇ ವಾರವನ್ನು ಗೆಲುವಿನಲ್ಲಿ ಕೊನೆಗೊಳಿಸಿದೆ. ಸೆನ್ಸೆಕ್ಸ್ ಈ ವಾರ 219.31 ಅಂಕಗಳನ್ನು ಸಂಪಾದಿಸಿದೆಯಾದರೆ ನಿಫ್ಟಿ 82.45 ಅಂಕಗಳನ್ನು ಸಂಪಾದಿಸಿದೆ.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,846 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು. 1,771 ಶೇರುಗಳು ಮುನ್ನಡೆ ಸಾಧಿಸಿದವು; 936 ಶೇರುಗಳು ಹಿನ್ನಡೆಗೆ ಗುರಿಯಾದವು; 139 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.