ಮುಂಬಯಿ : ನಿರಂತರ ನಾಲ್ಕನೇ ದಿನವಾದ ಇಂದು ಮಂಗಳವಾರ ಕೂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಗೆಲುವಿನ ಖಾತೆಯನ್ನು ಮುಂದುವರಿಸಿದೆ. ಇಂದು ರಿಲಯನ್ಸ್ ಶೇರು ಧಾರಣೆ ಭರ್ಜರಿ ಏರಿಕೆಯನ್ನು ದಾಖಲಿಸಿರುವುದು ಸೆನ್ಸೆಕ್ಸ್, ನಿಫ್ಟಿಯ ಮುನ್ನಡೆಗೆ ಕಾರಣವಾಗಿದೆ.
118.45 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ ಇಂದು ಮಂಗಳವಾರದ ವಹಿವಾಟನ್ನು 33,478.35 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 28.15 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,326.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ಮಟ್ಟಿಗೆ ಇಂದು ಮಂಗಳವಾರದ ವಹಿವಾಟಿನಲ್ಲಿ ದಾಖಲಾದ 33,731.19 ಅಂಕಗಳ ಮಟ್ಟವು ನ.6ರ ಬಳಿಕದ ಗರಿಷ್ಠ ಮಟ್ಟವಾಗಿದೆ. ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 599.46 ಅಂಕಗಳನ್ನು ಸಂಪಾದಿಸಿರುವುದು ಗಮನಾರ್ಹವಾಗಿದೆ.
ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಉತ್ತೇಜನ ಮತ್ತು ತೇಜಿ ಕಂಡುಬಂದಿರುವುದು ಹಾಗೂ ಅಮೆರಿಕದ ವಾಲ್ ಸ್ಟ್ರೀಟ್ ನಿನ್ನೆಯ ವಹಿವಾಟನ್ನು ಮೇಲ್ಮಟ್ಟದಲ್ಲಿ ಕೊನೆಗೊಳಿಸಿರುವುದು ಹಾಗೂ ಡಾಲರ್ ಎದುರು ರೂಪಾಯಿ ತಕ್ಕಮಟ್ಟಿಗೆ ಪ್ರಾಬಲ್ಯ ಮೆರೆಯುತ್ತಿರುವುದು ಭಾರತೀಯ ಶೇರು ಮಾರುಕಟ್ಟೆಗಳಿಗೆ ಹೊಸ ಟಾನಿಕ್ ಆಗಿ ಪರಿಣಮಿಸಿದೆ.