ಮುಂಬಯಿ : ಎರಡು ದಿನಗಳ ನಿರಂತರ ಕುಸಿತದಿಂದ ಕಂಗೆಟ್ಟಿದ್ದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು ಭರ್ಜರಿ 470 ಅಂಕಗಳ ಜಿಗಿತದೊಂದಿಗೆ 33,066 ಅಂಕಗಳ ಮಟ್ಟದಲ್ಲಿ ಹೊಸ ಭರವಸೆ ಮತ್ತು ವಿಶ್ವಾಸದೊಂದಿಗೆ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 132.60 ಅಂಕಗಳ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು 10,130.65 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಮುಂಬಯಿ ಶೇರು ಮಾರುಕಟ್ಟೆಯ ಇಂದಿನ ದಿಢೀರ್ ರಿಲೀಫ್ ರಾಲಿಗೆ ಸಾಥ್ ಕೊಟ್ಟವುಗಳೆಂದರೆ ಬ್ಯಾಂಕ್ ಶೇರುಗಳು. ಇವುಗಳೊಂದಿಗೆ ಮೆಟಲ್ ಮತ್ತು ಕನ್ಸೂಮರ್ ಡ್ನೂರೇಬಲ್ ಶೇರುಗಳು ಉತ್ತಮ ಬೆಂಬಲ ನೀಡಿದವು.
ಇಂದಿನ ಸಡನ್ ಜಿಗಿತದ ಹೊರತಾಗಿಯೂ ಶೇರು ಮಾರುಕಟ್ಟೆಯ ಆಂತರ್ಯದಲ್ಲಿ ಅಮೆರಿಕ ಮತ್ತು ಚೀನ ನಡುವಿನ ವಾಣಿಜ್ಯ ಸಮರವು ಜಾಗತಿಕ ವಾಣಿಜ್ಯ ಸಮರವಾಗಿ ನ್ಪೋಟಗೊಳ್ಳುವ ಭೀತಿ ಇರುವುದು ಕಂಡು ಬಂತು.
ಸೆನ್ಸೆಕ್ಸ್ ಕಳೆದ ಎರಡು ದಿನಗಳ ನಿರಂತರ ಸೋಲಿನ ವಹಿವಾಟಿನಲ್ಲಿ 539.64 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಇಂದಿನ ರಿಲೀಫ್ ರಾಲಿಯಲ್ಲಿ ಬ್ಯಾಂಕ್ ಆಫ್ ಬರೋಡ, ಎಸ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಶೇರುಗಳು ಶೇ.6.16ರಷ್ಟು ಏರಿಕೆಯನ್ನು ಕಂಡವು.
ಕಳೆದ ಶುಕ್ರವಾರದಂದು ವಿದೇಶಿ ಹೂಡಿಕೆದಾರರು 1,628.19 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದರೆ ದೇಶೀಯ ಸಾಂಸ್ಥಿಕ ಹೂಡಿಕೆದಾರರು 935.41 ಕೋಟಿ ರೂ. ಶೇರುಗಳನ್ನು ಮಾರಿದ್ದರು.