ಮುಂಬಯಿ : ನಿರಂತರ ಎರಡನೇ ದಿನವಾದ ಇಂದು ಶುಕ್ರವಾರ ತನ್ನ ಮುನ್ನಡೆಯನ್ನು ಕಾಯ್ದುಕೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 261.76 ಅಂಕಗಳ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು 34.924.87 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 91.30 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು ದಿನದ ವಹಿವಾಟನ್ನು 10,605.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ಸೆನ್ಸೆಕ್ಸ್ ನಿನ್ನೆ ಗುರುವಾರದ ವಹಿವಾಟಿನಲ್ಲಿ 318.20 ಅಂಕಗಳ ಏರಿಕೆಯನ್ನು ದಾಖಲಿಸಿತ್ತು.
ವಾರದ ನೆಲೆಯಲ್ಲಿ ನೋಡಿದರೆ ಸೆನ್ಸೆಕ್ಸ್ ಈ ವಾರ 76.57 ಅಂಕಗಳನ್ನು ಸಂಪಾದಿಸಿದೆ. ನಿಫ್ಟಿ ಸಂಪಾದನೆ ಕೇವಲ 8.75 ಅಂಕ.
ದೇಶೀಯ ಸಾಂಸ್ಥಿಕ ಹೂಡಿಕೆದಾರರು ನಿನ್ನೆ ಗುರುವಾರ 789.78 ಕೋಟಿ ರೂ.ಗಳ ಶೇರುಗಳನ್ನು ಖರೀದಿಸಿದ್ದರು; ವ್ಯತಿರಿಕ್ತವಾಗಿ ವಿದೇಶಿ ಹೂಡಿಕೆದಾರರು 311.11 ಕೋಟಿ ರೂ. ಮೌಲ್ಯದ ಶೇರುಗಳನ್ನು ಮಾರಿದ್ದರು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,784 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,630 ಶೇರುಗಳು ಮುನ್ನಡೆ ಕಂಡವು; 1,004 ಶೇರುಗಳು ಹಿನ್ನಡೆಗೆ ಗುರಿಯಾದವು; 150 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.