ಮುಂಬಯಿ : ಮುಂಚೂಣಿ ಕಂಪೆನಿಗಳ ಜೂನ್ ತ್ತೈಮಾಸಿಕ ಫಲಿತಾಂಶ ಉತ್ತಮವಾಗಿರುವುವು ಎಂಬ ನಂಬಿಕೆಯಲ್ಲಿ ಮುಂಬಯಿ ಶೇರು ಪೇಟೆ ಇಂದು ಮಂಗಳವಾರ 305 ಅಂಕಗಳ ಭರ್ಜರಿ ಮುನ್ನಡೆಯನ್ನು ಸಾಧಿಸಿ ದಿನದ ವಹಿವಾಟನ್ನು ಐದು ತಿಂಗಳ ಗರಿಷ್ಠ ಮಟ್ಟವಾಗಿ 36,239.62 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದರೊಂದಿಗೆ ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 665.07 ಅಂಕಗಳನ್ನು ಗಳಿಸಿದಂತಾಗಿದೆ. ಈ ವರ್ಷ ಜನವರಿ 29ರಂದು ಸೆನ್ಸೆಕ್ಸ್ 36,283.25 ಅಂಕಗಳ ಮಟ್ಟವನ್ನು ಮುಟ್ಟಿತ್ತು. ಅಲ್ಲಿಯ ಬಳಿಕದ ಗರಿಷ್ಠ ಮಟ್ಟ ಇಂದಿನದ್ದಾಗಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದು 94.35 ಅಂಕಗಳ ಮುನ್ನಡೆಯನ್ನು ದಾಖಲಿಸಿ ದಿನದ ವಹಿವಾಟನು 10,947.25 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ದಿನಪೂರ್ತಿ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಅನುಕ್ರಮವಾಗಿ 36,000 ಮತ್ತು 10,900 ಅಂಕಗಳ ಮಟ್ಟವನ್ನು ಕಾಯ್ದುಕೊಂಡಿರುವುದು ಗಮನಾರ್ಹವಾಗಿದೆ. ಇದರಿಂದಾಗಿ ಹೂಡಿಕೆದಾರರಲ್ಲಿ ಹೊಸ ವಿಶ್ವಾಸ, ಹುಮ್ಮಸ್ಸು ಮೂಡಿದಂತಾಗಿದೆ.
ನಿನ್ನೆ ಸೋಮವಾರ ದೇಶೀಯ ಹೂಡಿಕೆದಾರ ಸಂಸ್ಥೆಗಳು 740.39 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದರು. ವಿದೇಶಿ ಹೂಡಿಕೆದಾರರು 569.91 ಕೋಟಿ ರೂ. ಶೇರುಗಳನ್ನು ಮಾರಿದ್ದರು.