ಮುಂಬಯಿ : ದಿನಪೂರ್ತಿ ಏರಿಳಿತಗಳನ್ನು ಕಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಶುಕ್ರವಾರದ ವಹಿವಾಟನ್ನು ಅಚ್ಚರಿಯ ರೂಪದಲ್ಲಿ 257 ಅಂಕಗಳ ಜಿಗಿತದೊಂದಿಗೆ 35,689.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಮನೋ ಪ್ರಾಬಲ್ಯದ 10,800 ಅಂಕಗಳ ಮಟ್ಟವನ್ನು ದಾಟಿ ದಿನದ ವಹಿವಾಟನ್ನು 80.75 ಅಂಕಗಳ ಏರಿಕೆಯೊಂದಿಗೆ 10,821.85 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ ಅನೇಕ ದಿನಗಳಿಂದ ನಿರಂತರವಾಗಿ ಶೇರುಗಳನ್ನು ಮಾರುತ್ತಲೇ ಇದ್ದ ವಿದೇಶಿ ಹೂಡಿಕೆದಾರರು ಇಂದು ದೊಡ್ಡ ಮಟ್ಟದಲ್ಲಿ ಶೇರು ಖರೀದಿಗೆ ತೊಡಗಿದ್ದೇ ತೇಜಿಗೆ ಕಾರಣವಾಯಿತು. ಎಂದಿನಂತೆ ಇಂದು ಕೂಡ ದೇಶೀಯ ಹೂಡಿಕೆದಾರ ಸಂಸ್ಥೆಗಳು ಶೇರು ಖರೀದಿಯಲ್ಲಿ ಆಸಕ್ತಿ ತೋರಿದವು.
ವಾರದ ನೆಲೆಯಲ್ಲಿ ಹೇಳುವುದಾದರೆ ಸೆನ್ಸೆಕ್ಸ್ ಮತ್ತು ನಿಫ್ಟಿ ನಿರಂತರ ಐದನೇ ವಾರದಲ್ಲಿ ಲಾಭವನ್ನು ದಾಖಲಿಸಿವೆ. ಸೆನ್ಸೆಕ್ಸ್ ಸಾಪ್ತಾಹಿಕ ಮುನ್ನಡೆ 67.46 ಅಂಕಗಳಾದರೆ ನಿಫ್ಟಿ ಸಾಧಿಸಿರುವ ಮುನ್ನಡೆ 4.15 ಅಂಕ.
ವಿದೇಶಿ ಹೂಡಿಕೆದಾರರು 1,126.75 ಕೋಟಿ ರೂ. ಶೇರು ಖರೀಸಿದ್ದಾರೆ; ದೇಶೀಯ ಹೂಡಿಕೆದಾರ ಸಂಸ್ಥೆಗಳು 663.57 ಕೋಟಿ ರೂ. ಶೇರು ಖರೀದಿಸಿವೆ.