ಮುಂಬಯಿ : ಮುಂಬಯಿ ಶೇರು ಪೇಟೆಯ ಮೂರು ದಿನಗಳ ನಿರಂತರ ಏರಿಕೆಗೆ ಇಂದು ಗುರುವಾರದ ವಹಿವಾಟಿನಲ್ಲಿ ಬ್ರೇಕ್ ಬಿದ್ದಿದೆ. ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ಬಡ್ಡಿ ದರ ಏರಿಸಿರುವ ಪರಿಣಾಮವಾಗಿ ವಿದೇಶಿ ಬಂಡವಾಳದ ಹೊರ ಹರಿವು ಇನ್ನಷ್ಟು ಹೆಚ್ಚುವ ಭೀತಿಯಲ್ಲಿ ಸೆನ್ಸೆಕ್ಸ್ ಇಂದು 139.34 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 35,599.82 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ಕಳೆದ ಮೂರು ದಿನಗಳ ಏರುಗತಿಯ ವಹಿವಾಟಿನಲ್ಲಿ ಒಟ್ಟು 295.49 ಅಂಕಗಳನ್ನು ಗಳಿಸಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 48.65 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,808.05 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್ ನಿನ್ನೆ ಬುಧವಾರ ತನ್ನ ಬಡ್ಡಿದರವನ್ನು ಶೇ.0.25ರ ಏರಿಕೆಯನ್ನು ಮಾಡಿತ್ತು. ಇದು ಈ ವರ್ಷದ ಎರಡನೇ ಬಾರಿಯ ಏರಿಕೆಯಾಗಿದ್ದು 2018ರಲ್ಲಿ ಇನ್ನೂ ಎರಡು ಮತ್ತು 2019ರಲ್ಲಿ ನಾಲ್ಕು ಬಾರಿಯ ಏರಿಕೆಗಳನ್ನು ಮಾಡುವ ಇಂಗಿತವನ್ನು ಫೆಡರಲ್ ರಿಸರ್ವ್ ಬ್ಯಾಂಕ್ ವ್ಯಕ್ತಪಡಿಸಿರುವುದು ಶೇರು ಮಾರುಕಟ್ಟೆಗಳಿಗೆ ಅಪಥ್ಯವಾಗಿದೆ.
ನಿನ್ನೆ ಬುಧವಾರ ವಿದೇಶಿ ಹೂಡಿಕೆದಾರರು 70.77 ಕೋಟಿ ರೂ ಶೇರುಗಳನ್ನು ಮಾರಿದ್ದರು; ವ್ಯತಿರಿಕ್ತವಾಗಿ ದೇಶೀಯ ಹೂಡಿಕೆದಾರ ಸಂಸ್ಥೆಗಳು 486.78 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದವು.