ಮುಂಬಯಿ : ನಿರಂತರ ಎರಡು ದಿನ ಮುನ್ನಡೆ ಕಂಡಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಗುರುವಾರದ ವಹಿವಾಟನ್ನು 71 ಅಂಕಗಳ ನಷ್ಟದೊಂದಿಗೆ 35,574.55 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಚೀನೀ ವಸ್ತುಗಳ ಮೇಲೆ ಅಮೆರಿಕ ಸುಂಕ ಹೇರುವ ಕ್ರಮಕ್ಕೆ ಮುಂದಾಗುವ ಮುನ್ನವೇ ಏಶ್ಯನ್ ಶೇರು ಪೇಟೆಗಳು ಮುದುಡಿದ ಕಾರಣ ಮುಂಬಯಿ ಶೇರು ಪೇಟೆಯಲ್ಲಿ ಕೂಡ ನಿರುತ್ಸಾಹದ ವಾತಾವರಣ ನೆಲೆಗೊಂಡಿತು.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮುಕೇಶ್ ಅಂಬಾನಿ ಅವರು ಗೃಹ ಮತ್ತು ಉದ್ಯಮ ಸಂಸ್ಥೆಗಳಿಗಾಗಿ ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಆರಂಭಿಸಿದ ಹೊರತಾಗಿಯೂ RIL ಶೇರು ಇಂದು ಶೇ.2.53ರಷ್ಟು ಕುಸಿಯಿತು. ಇದೇ ರೀತಿ ಕನ್ಸೂಮರ್ ಡ್ಯುರೇಬಲ್, ರಿಯಲ್ಟಿ, ಐಟಿ, ಮೆಟಲ್, ಟೆಕ್, ಫಾರ್ಮಾ, ಕ್ಯಾಪಿಟಲ್ ಗೂಡ್ಸ್, ಪವರ್ ಮತ್ತು ಆಯಿಲ್ ಆ್ಯಂಡ್ ಗ್ಯಾಸ್ ಕ್ಷೇತ್ರದ ಶೇರುಗಳು ಇಂದು ತೀವ್ರ ಮಾರಾಟದ ಒತ್ತಡವನ್ನು ಕಂಡವು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 20.15 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,749.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,756 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,053 ಶೇರುಗಳು ಮುನ್ನಡೆ ಸಾಧಿಸಿದವು; 1,557 ಶೇರುಗಳು ಹಿನ್ನಡೆಗೆ ಗುರಿಯಾದವು; 146 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.