ಮುಂಬಯಿ : ಇಂದು ಸೋಮವಾರ ಆರಂಭವಾಗಿರುವ ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆಯ ಸಭೆಯ ಫಲಿತಾಂಶವನ್ನು ಕಾತರದಿಂದ ಕಾಯುತ್ತಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ, ವಹಿವಾಟುದಾರರು ತೋರಿರುವ ಎಚ್ಚರಿಕೆಯ ನಡೆಯ ಪರಿಣಾಮವಾಗಿ 215 ಅಂಕಗಳ ಕುಸಿತಕ್ಕೆ ಗುರಿಯಾಗಿ ದಿನದ ವಹಿವಾಟನ್ನು 35,011.89 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಹಣದುಬ್ಬರವು ಸ್ಥಿರತೆಯನ್ನು ತೋರುತ್ತಿರುವ ನೆಲೆಯಲ್ಲಿ ಆರ್‌ಬಿಐ ಕಳೆದ ನಾಲ್ಕೂವರೆ ವರ್ಷಗಳಲ್ಲೇ ಮೊದಲ ಬಾರಿಗೆ ಇದೇ ಜೂನ್ 6ರಂದು ತನ್ನ ಪ್ರಮುಖ ಬಡ್ಡಿ ದರಗಳನ್ನು ಏರಿಸುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಇಂದು ಆರಂಭಿಕ ವಹಿವಾಟಿನಲ್ಲಿ ಉತ್ತಮ ಏರಿಕೆ ಕಂಡಿದ್ದ ಸೆನ್ಸೆಕ್ಸ್ ಅನಂತರ ಮುಗ್ಗರಿಸಿ ದಿನದ ವಹಿವಾಟನ್ನು 215.37 ಅಂಕಗಳ ನಷ್ಟದೊಂದಿಗೆ 35,011.89 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 67.70 ಅಂಕಗಳ ನಷ್ಟದೊಂದಿಗೆ ದಿನದ ವಹಿವಾಟನ್ನು 10,628.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ ಶುಕ್ರವಾರ ವಿದೇಶಿ ಹೂಡಿಕೆದಾರರು 202.80 ಕೋಟಿ ರೂ. ಶೇರುಗಳನ್ನು ಮಾರಿದ್ದರು. ವ್ಯತಿರಿಕ್ತವಾಗಿ ದೇಶೀಯ ಹೂಡಿಕೆದಾರ ಸಂಸ್ಥೆಗಳು 337.97 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದರು.
ಇಂದು ಮುಂಬಯಿ ಶೇರು ಪೇಟೆಯಲ್ಲಿ ಒಟ್ಟು 2,872 ಶೇರುಗಳು ವಹಿವಾಟಿಗೆ ಒಳಪಟ್ಟವು. 563 ಶೇರುಗಳು ಮುನ್ನಡೆ ಸಾಧಿಸಿದವು; 2,127 ಶೇರುಗಳು ಹಿನ್ನಡೆಗೆ ಗುರಿಯಾದವು; 182 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.