ಮುಂಬಯಿ : ಮಾರ್ಚ್ ತಿಂಗಳ ವಾಯಿದೆ ವಹಿವಾಟು ಚುಕ್ತಾ ದಿನ ಮತ್ತು ಈ ಸಾಲಿನ ಹಣಕಾಸು ವರ್ಷದ ಕೊನೆ ಸಮೀಪಿಸುತ್ತಿರುವ ಕಾರಣ ಹೂಡಿಕೆದಾರರು ಮತ್ತು ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿರುವುದರಿಂದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 150 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ವಾಲ್ ಸ್ಟ್ರೀಟ್ ಶೇರು ಮಾರುಕಟ್ಟೆಯಲ್ಲಿ ನಿನ್ನೆ ಶೇರುಗಳು ಭಾರೀ ಕುಸಿತವನ್ನು ಕಂಡಿರುವುದನ್ನು ಅನುಸರಿಸಿ ಇಂದು ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಕುಸಿತ ಕಂಡು ಬಂತು. ಮೆಟಲ್, ಪಿಎಸ್‌ಯು, ಪವರ್ ಮತ್ತು ಬ್ಯಾಂಕಿಂಗ್ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.1.34ರಷ್ಟು ಕುಸಿದವು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 577.85 ಅಂಕಗಳನ್ನು ಸಂಪಾದಿಸಿತ್ತು.
ಇಂದು ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 201.03 ಅಂಕಗಳ ನಷ್ಟದೊಂದಿಗೆ 32,973.36 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 62.10 ಅಂಕಗಳ ನಷ್ಟದೊಂದಿಗೆ 10,122.10 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಟಾಟಾ ಸ್ಟೀಲ್, ಅದಾನಿ ಪೋರ್ಟ್, ಎಸ್‌ಬಿಐ, ಎನ್‌ಟಿಪಿಸಿ ಎಸ್ ಬ್ಯಾಂಕ್ , ಐಸಿಐಸಿಐ ಬ್ಯಾಂಕ್, ಏಶ್ಯನ್ ಪೇಂಟ್, ಕೋಲ್ ಇಂಡಿಯಾ, ಒಎನ್‌ಜಿಸಿ, ಪವರ್ ಗ್ರಿಡ್, ಆರ್‌ಐಎಲ್, ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಇನ್‌ಫೋಸಿಸ್ ಶೇರುಗಳು ಶೇ.2.08ರಷ್ಟು ಕುಸಿದವು.