ಮುಂಬಯಿ : ಫೆಬ್ರವರಿ ತಿಂಗಳ ವಾಯಿದೆ ವಹಿವಾಟು ಚುಕ್ತಾ ಗಡುವು ಸಮೀಪಿಸುತ್ತಿರುವಂತೆಯೇ ಹೂಡಿಕೆದಾರರ ಮತ್ತು ವಹಿವಾಟುದಾರರು ಎಚ್ಚರಿಕೆಯ ನಡೆ ತೋರಿರುವ ಕಾರಣ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 144 ಅಂಕಗಳ ನಷ್ಟವನ್ನು ಅನುಭವಿಸಿತು.
ನಿನ್ನೆ ಬುಧವಾರದ ವಹಿವಾಟನ್ನು 141.27 ಅಂಕಗಳ ಏರಿಕೆಯೊಂದಿಗೆ ಕೊನೆಗೊಳಿಸಿದ್ದ ಸೆನ್ಸೆಕ್ಸ್ ಇಂದು ಮತ್ತು ಸೋಲಿನ ಹಾದಿಗೆ ಹೊರಳಿಕೊಂಡಿತು.
ತೈಲ ಮತ್ತು ಅನಿಲ, ಲೋಹ, ಆಟೋ, ಪಿಎಸ್‌ಯು ಮತ್ತು ಬ್ಯಾಂಕಿಂಗ್ ರಂಗದ ಶೇರುಗಳು ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಶೇ.0.99ರಷ್ಟು ಕುಸಿದವು.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 98.10 ಅಂಕಗಳ ನಷ್ಟದೊಂದಿಗೆ 33,746.76 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 39.15 ಅಂಕಗಳ ನಷ್ಟದೊಂದಿಗೆ 10,358.30 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಟಾಟಾ ಸ್ಟೀಲ್, ಇನ್‌ಫೋಸಿಸ್, ಸನ್ ಫಾರ್ಮಾ, ಟಿಸಿಎಸ್ ಮಾರುತಿ ಸುಜುಕಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ರೂಪಾಯಿ ವಿನಿಮಯ ದರ ಇಂದು ಮತ್ತೆ 30 ಪೈಸೆಯಷ್ಟು ಕುಸಿದು 65.06 ರೂ ಮಟ್ಟಕ್ಕೆ ಇಳಿದಿರುವುದು ಮುಂಬಯಿ ಶೇರು ಪೇಟೆಯ ಉತ್ಸಾಹವನ್ನು ಕುಂದಿಸಿತ್ತು.