ಮುಂಬಯಿ : ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ತಳಮಟ್ಟ ತಲುಪಿರುವುದು ಮತ್ತು ಟರ್ಕಿ ಕರೆನ್ಸಿ ಬಿಕ್ಕಟ್ಟು ಕಳವಳಕಾರಿಯಾಗಿ ಕಂಡು ಬಂದಿರುವ ಕಾರಣಕ್ಕೆ ಜಾಗತಿಕ ಶೇರು ಪೇಟೆಗಳು ಹಿನ್ನಡೆದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟಿನಲ್ಲಿ 224,33 ಅಂಕಗಳ ನಷ್ಟಕ್ಕೆ ಗುರಿಯಾಗಿ, ಎರಡು ವಾರಗಳ ಕನಿಷ್ಠ ಮಟ್ಟದ ಸನಿಹದಲ್ಲಿ , 37,644.90 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಮುಗಿಸಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 73.75 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,355.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು. ವಿದೇಶಿ ಬಂಡವಾಳದ ಹೊರ ಹರಿವು ಕೂಡ ಶೇರು ಪೇಟೆಯ ಕುಸಿತಕ್ಕೆ ಕಾರಣವಾಯಿತು.
ಡಾಲರ್ ಎದುರು ರೂಪಾಯಿ 69.85 ರೂ. ಸಾರ್ವಕಾಲಿಕ ತಳ ಮಟ್ಟಕ್ಕೆ (ವ್ಯವಹಾರದ ನಡುವಿನ ಅವಧಿಯಲ್ಲಿ) ಕುಸಿದ ಕಾರಣ ಬ್ಯಾಂಕ್, ಪಿಎಸ್‌ಯು, ಹಣಕಾಸು ರಂಗದ ಶೇರುಗಳು ತೀವ್ರ ಮಾರಾಟ ಒತ್ತಡಕ್ಕೆ ಗುರಿಯಾದವು. ಎಸ್‌ಬಿಐ ಶೇರು ಇಂದು ಶೇ.3.17ರ ನಷ್ಟಕ್ಕೆ ಗುರಿಯಾಯಿತು.
ಪಿಎನ್‌ಬಿ, ಎಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡ, ಫೆಡರಲ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಎಚ್‌ಡಿಎಫ್ಸಿ ಬ್ಯಾಂಕ್ ಮತ್ತು ಐಸಿಐಸಿ ಬ್ಯಾಂಕ್ ಶೇರುಗಳು ಇಂದು ಶೇ.3.37ರಷ್ಟು ಕುಸಿದವು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,857 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 954 ಶೇರುಗಳು ಮಾತ್ರವೇ ಮುನ್ನಡೆ ಕಂಡವು; 1,738 ಶೇರುಗಳು ಹಿನ್ನಡೆಗೆ ಗುರಿಯಾದವು; 165 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.