ಮುಂಬಯಿ : ಬೆಳಗ್ಗಿನ 165 ಅಂಕಗಳ ಸೊಗಸಾದ ರಾಲಿಯನ್ನು ಹಿಡಿದಿಟ್ಟು ಕೊಳ್ಳಲು ವಿಫಲವಾದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು ಕೇವಲ 7.79 ಅಂಕಗಳ ಮುನ್ನಡೆಯೊಂದಿಗೆ 31,103.49 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 9.05 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 9,606.90 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನ ಕೊನೇ ಭಾಗದಲ್ಲಿ ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದದ್ದೇ ಸೆನ್ಸೆಕ್ಸ್, ನಿಫ್ಟಿ ಹಿಂದುಳಿಯಲು ಕಾರಣವಾಯಿತು. ಮೇಲಾಗಿ ಇಂದು ರಾತ್ರಿ ಆರಂಭಗೊಳ್ಳುವ ಎರಡು ದಿನಗಳ ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕಿನ ನಿರ್ಣಾಯಕ ಸಭೆಯ ಫಲಿತಾಂಶವನ್ನು ತಿಳಿಯುವ ಕಾತರ ಕಂಡು ಬಂತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,342 ಶೇರುಗಳು ಹಿನ್ನಡೆಗೆ ಗುರಿಯಾದವು; 1,325 ಶೇರುಗಳು ಮುನ್ನಡೆ ಕಂಡವು.
ಪವರ್ ಗ್ರಿಡ್, ಲೂಪಿನ್, ಎನ್‌ಟಿಪಿಸಿ, ಎಚ್ ಡಿ ಎಫ್ ಸಿ, ಬ್ಯಾಂಕ್ ಆಫ್ ಬರೋಡ ಶೇರುಗಳು ಟಾಪ್ ಗೇನರ್ ಎನಿಸಿದವು. ವೇದಾಂತ ಎಚ್‌ಸಿಎಲ್ ಟೆಕ್, ಟಾಟಾ ಮೋಟರ್, ವಿಪ್ರೋ, ಟಾಟಾಮೋಟರ್ ಶೇರುಗಳು ಟಾಪ್ ಲೂಸರ್ ಎನಿಸಿದವು.