ಮುಂಬಯಿ : ಏರುತ್ತಿರುವ ಕಚ್ಚಾ ತೈಲ ಬೆಲೆ, ಆರ್‌ಬಿಐ ಪ್ರಕಟಿಸಲಿರುವ ಹಣಕಾಸು ನೀತಿ, ಹಣದುಬ್ಬರ ಅಂಕಿ ಅಂಶ, ಹೆಚ್ಚುತ್ತಿರುವ ವಿದೇಶೀ ಹೂಡಿಕೆಯ ಹೊರ ಹರಿವು ಇವೇ ಮೊದಲಾದ ಕಾರಣಕ್ಕೆ ನಲುಗುತ್ತಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 60 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಬೆಳಗ್ಗೆ 11.50ರ ಹೊತ್ತಿಗೆ ಸೆನ್ಸೆಕ್ಸ್ 231.10 ಅಂಕಗಳ ನಷ್ಟದೊಂದಿಗೆ 35,996.04 ಅಂಕಗಳ ಮಟ್ಟಕ್ಕೆ ಕುಸಿಯಿತಾದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 100.20 ಅಂಕಗಳ ನಷ್ಟದೊಂದಿಗೆ 10,830.30 ಅಂಕಗಳ ಮಟ್ಟಕ್ಕೆ ಇಳಿಯಿತು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಎಸ್ ಬ್ಯಾಂಕ್, ಕೋಟಕ್ ಮಹೀಂದ್ರ, ಬಜಾಜ್ ಫಿನಾನ್ಸ್ ಇಂಡಸ್‌ಇಂಡ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಟಿಸಿಎಸ್, ಎಸ್‌ಬ್ಯಾಂಕ್, ವಿಪ್ರೋ, ಇನ್‌ಫೋಸಿಸ್, ಹಿಂಡಾಲ್ಕೊ, ಎಚ್ ಡಿ ಎಫ್ ಸಿ, ಭಾರ್ತಿ ಇನ್‌ಫ್ರಾಟೆಲ್ ಮುನ್ನಡೆ ಕಂಡರೆ, ಟಾಪ್ ಲೂಸರ್‌ಗಳಾಗಿ ಕೋಟಕ್ ಮಹೀಂದ್ರ, ಅಲ್‌ಟ್ರಾ ಟೆಕ್ ಸಿಮೆಂಟ್, ಲಾರ್ಸನ್, ಎಕ್ಸಿಸ್ ಬ್ಯಾಂಕ್, ಈಶರ್ ಮೋಟರ್, ಎಚ್‌ಪಿಸಿಎಲ್, ಭಾರ್ತಿ ಏರ್‌ಟೆಲ್ ಶೇರುಗಳು ಹಿನ್ನಡೆಗೆ ಗುರಿಯಾದವು.
ಡಾಲರ್ ಎದುರು ರೂಪಾಯಿ ಇಂದು 36 ಪೈಸೆಯಷ್ಟು ಕುಸಿದು 72.84 ರೂ. ಮಟ್ಟಕ್ಕೆ ಜಾರಿತು. ಆರ್‌ಬಿಐ ತಾನು 36,000 ಕೋಟಿ ರೂ.ಗಳ ಸರಕಾರಿ ಬಾಂಡ್‌ಗಳನ್ನು ಖರೀದಿಸಿ ನಗದು ಲಭ್ಯತೆಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ ಹೊರತಾಗಿಯೂ ರೂಪಾಯಿ ಕುಸಿತ ಅನಿರ್ವಾಯವಾಯಿತು.