ಮುಂಬಯಿ : ನಿರಂತರ ನಾಲ್ಕನೇ ದಿನ ತನ್ನ ಏರು ಗತಿಯನ್ನು ಮುಂದುವರಿಸಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 130 ಅಂಕಗಳ ಮುನ್ನಡೆಯನ್ನು ದಾಖಲಿಸಿತು.
ಕಳೆದ ಮೂರು ದಿನಗಳ ನಿರಂತರ ಏರಿಕೆಯಲ್ಲಿ ಸೆನ್ಸೆಕ್ಸ್ ಒಟ್ಟು 774.47 ಅಂಕಗಳನ್ನು ಸಂಪಾದಿಸಿ ಹೂಡಿಕೆದಾರರಲ್ಲಿ ಹೊಸ ಆಶಾಕಿರಣವನ್ನು ಕಾಣಿಸಿತ್ತು.
ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿ,ಗ್ ಅವರ ಭಾಷಣವು ಜಾಗತಿಕ ವಾಣಿಜ್ಯ ಸಮರ ಭೀತಿಯನ್ನು ನಿವಾರಿಸಿರುವ ಹಿನ್ನೆಲೆಯಲ್ಲಿ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತೇಜಿ ಕಂಡುಬಂದಿದ್ದು ಮುಂಬಯಿ ಶೇರು ಪೇಟೆ ಅದನ್ನು ಅನುಸರಿಸಿರುವುದು ಗಮನಾರ್ಹವಾಗಿದೆ.
ಇಂದು ಬೆಳಗ್ಗೆ 11.15ರ ಹೊತ್ತಿಗೆ ಸೆನ್ಸೆಕ್ಸ್ 88.54 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 33,877.08 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 21.80 ಅಂಕಗಳ ಮುನ್ನಡೆಯೊಂದಿಗೆ 10,401.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಹಿಂಡಾಲ್ಕೋ, ಟಾಟಾ ಸ್ಟೀಲ್, ವೇದಾಂತ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ರೂಪಾಯಿ ವಿನಿಮಯ ದರ ಇಂದು ಬೆಳಗ್ಗೆ 14 ಪೈಸೆಯಷ್ಟು ಸುಧಾರಿಸಿ 64.88ರಲ್ಲಿ ವ್ಯವಹಾರ ನಿರತವಾಗಿತ್ತು.