ಮುಂಬಯಿ : ಶೇಕಡಾ 97ರಷ್ಟು ಮಳೆ ತರುವ ಈ ಬಾರಿಯ ಮುಂಗಾರು ಮಾಮೂಲಿಯದ್ದಾಗಿರುತ್ತದೆ ಎಂದು ಹವಾಮಾನ ಇಲಾಖೆ ನುಡಿದಿರುವ ಭವಿಷ್ಯದಿಂದ ಮುಂಬಯಿ ಶೇರು ಪೇಟೆ ಗರಿಗೆದರಿರುವ ಕಾರಣ ನಿರಂತರ 9ನೇ ದಿನವಾಗಿ ಇಂದು ಮಂಗಳವಾರದ ವಹಿವಾಟನ್ನು sensex 90 ಅಂಕಗಳ ಮುನ್ನಡೆಯೊದಿಗೆ 34,395 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ ಎಂಟು ದಿನಗಳಿಂದ ನಿರಂತರ ಏರುಗತಿಯನ್ನು ಕಾಯ್ದುಕೊಂಡಿರುವ ಮುಂಬಯಿ ಶೇರು ಒಟ್ಟಾರೆಯಾಗಿ 1,286.36 ಅಂಕಗಳನ್ನು ಸಂಪಾದಿಸಿದ್ದು ಇದು 2014ರ ಬಳಿಕದ ಅತಿ ದೀರ್ಘದ ಏರುಗತಿಯಾಗಿ ದಾಖಲಾಗಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 20.35 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು 10,548.70 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,803 ಕಂಪೆನಿಗಳ ಶೇರುಗಳು ವ್ಯವಹಾರಕ್ಕೆ ಒಳಪಟ್ಟವು. 1,392 ಶೇರುಗಳು ಮುನ್ನಡೆ ಕಂಡವು; 1,252 ಶೇರುಗಳು ಹಿನ್ನಡೆಗೆ ಗುರಿಯಾದವು; 159 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ನಿನ್ನೆ ಸೋಮವಾರ ವಿದೇಶೀ ಹೂಡಿಕೆದಾರರು 308.13 ಕೋಟಿ ರೂ. ಮೌಲ್ಯದ ಶೇರುಗಳನ್ನು ಮಾರಿದ್ದರು. ಅದೇ ರೀತಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು 28.97 ಕೋಟಿ ರೂ. ಶೇರುಗಳನ್ನು ಮಾರಿದ್ದರು.