ಮುಂಬಯಿ : ಐದು ದಿನಗಳ ನಿರಂತರ ಕುಸಿತದಿಂದ ಕೊನೆಗೂ ಮೇಲೆದ್ದು ಬಂದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 73.64 ಅಂಕಗಳ ಏರಿಕೆಯೊಂದಿಗೆ 32,996.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಹಿವಾಟುದಾರರು ಮತ್ತು ಹೂಡಿಕೆದಾರರು ಈಚಿನ ದಿನಗಳಲ್ಲಿ ಹೊಡೆದುರುಳಿಸಲ್ಪಟ್ಟಿದ್ದ ಮುಂಚೂಣಿಯ ಶೇರುಗಳನ್ನು ಖರೀದಿಸುವ ಆಸಕ್ತಿ ತೋರಿದ್ದೆ ಇಂದಿನ ಏರಿಕೆಗೆ ಕಾರಣವಾಯಿತು. ಪರಿಣಾಮವಾಗಿ ಐಟಿ, ಟೆಲಿಕಾಂ ಮತ್ತು ಆಟೋ ಶೇರುಗಳು ಮುನ್ನಡೆ ಕಂಡವು.
ಸೆನ್ಸೆಕ್ಸ್ ಕಳೆದ ಐದು ದಿನಗಳ ನಿರಂತರ ಸೋಲಿನ ಹಾದಿಯಲ್ಲಿ 994.82 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 30.10 ಅಂಕಗಳ ಮುನ್ನಡೆಯನ್ನು ಸಾಧಿಸಿ ದಿನದ ವಹಿವಾಟನ್ನು 10,124.35 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಜೆರೋಮ್ ಪೊವೆಲ್ ಅವರು ನಡೆಸುವ ಇಂದಿನ ಚೊಚ್ಚಲ ಬಡ್ಡಿ ಪರಿಷ್ಕರಣೆ ಸಭೆಯ ಫಲಿತಾಂಶದ ಮೇಲೆ ಜಾಗತಿಕ ಹೂಡಿಕೆದಾರರ ಕಣ್ಣು ನೆಟ್ಟಿದೆ ಎಂದು ಬ್ರೋಕರ್‌ಗಳು ಹೇಳಿದ್ದಾರೆ.