ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ಸ್ಥಿರತೆಯ ಪ್ರವೃತ್ತಿಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 167 ಅಂಕಗಳ ಮುನ್ನಡೆಯನ್ನು ಸಾಧಿಸಿತು.
ಡಾಲರ್ ಎದುರು ರೂಪಾಯಿ ಬಲಿಷ್ಠಗೊಂಡಿರುವುದು ಕೂಡ ಶೇರು ಮಾರುಕಟ್ಟೆಗೆ ವಿಶೇಷ ಹುರುಪು ನೀಡಿತು.
ಮೆಟಲ್, ಹೆಲ್ತ್ ಕೇರ್, ಮತ್ತು ರಿಯಲ್ಟಿ ಕೌಂಟರ್‌ಗಳಲ್ಲಿ ಭರಾಟೆಯ ಖರೀದಿ ಕಂಡುಬಂತು. ಅದಾನಿ, ಎಚ್ ಡಿ ಎಫ್ ಸಿ, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಡಾ. ರೆಡ್ಡಿ, ಟಾಟಾ ಮೋಟರ್, ಎಸ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಮಾರುತಿ ಸುಜುಕಿ ಶೇರುಗಳು ಶೇ.2.17ರಷ್ಟು ಮುನ್ನಡೆ ಸಾಧಿಸಿದವು.
ಇದೇ ವೇಳೆ ಬಿಲಿಯಗಟ್ಟಲೆ ಹಗರಣದಿಂದ ಸುದ್ದಿಯಾಗಿದ್ದ ಪಿಎನ್‌ಬಿ ಶೇರು ಧಾರಣೆ ಶೇ.8.47ರಷ್ಟು ಕುಸಿಯಿತು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 226.88 ಅಂಕಗಳ ಮುನ್ನಡೆಯನ್ನು ಸಾಧಿಸಿ 34,382.83 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 70.30 ಅಂಕಗಳ ಮುನ್ನಡೆಯೊಂದಿಗೆ 10,571.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.