ಮುಂಬಯಿ : ವಿದೇಶಿ ಬಂಡವಾಳದ ಹೊಸ ಒಳ ಹರಿವು, ಡಾಲರ್ ಎದುರು ರೂಪಾಯಿ ಚೇತರಿಕೆ ಮತ್ತು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ – ಇವೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 413ಕ್ಕ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು.
ಅಮೆರಿಕ ಮತ್ತು ಚೀನ ನಡುವಿನ ವಾಣಿಜ್ಯ ಬಿಕ್ಕಟ್ಟು ಶಮನವಾಗುತ್ತಿರುವ ಹಿನ್ನೆಲೆಯಲ್ಲಿ ಏಶ್ಯನ್ ಶೇರು ಪೇಟೆಗಳಲ್ಲಿ ಇಂದು ತೇಜಿ ಕಂಡು ಬಂತು.
ಬೆಳಗ್ಗೆ 11.30ರ ಸುಮಾರಿಗೆ ಸೆನ್ಸೆಕ್ಸ್ 565.16 ಅಂಕಗಳ ಭರ್ಜರಿ ಮುನ್ನಡೆಯೊಂದಿಗೆ 34,997.13 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 174.00 ಅಂಕಗಳ ಮುನ್ನಡೆಯೊಂದಿಗೆ 10,554.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ರಿಲಯನ್ಸ್, ಎಚ್ ಡಿ ಎಫ್ ಸಿ,ಎಸ್ ಬ್ಯಾಂಕ್, ಮಾರುತಿ ಸುಜಕಿ, ಐಸಿಐಸಿಐ ಬ್ಯಾಂಕ್ ಶೇರುಗಳು ಇಂದು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಬಿಪಿಸಿಎಲ್, ವೇದಾಂತ, ಹೀರೋ ಮೋಟೋ ಕಾರ್ಪ್, ಐಓಸಿ, ಮಹೀಂದ್ರ; ಟಾಪ್ ಲೂಸರ್‌ಗಳು : ಡಾ.ರೆಡ್ಡಿ, ವಿಪ್ರೋ, ಸಿಪ್ಲಾ, ಟಿಸಿಎಸ್, ಟೆಕ್ ಮಹೀಂದ್ರ.
ಡಾಲರ್‌ಎದುರು ರೂಪಾಯಿ ಇಂದು 31 ಪೈಸೆಗಳ ಏರಿಕೆಯನ್ನು ಕಂಡು 73.14 ರೂ. ಮಟ್ಟಕ್ಕೆ ಜಿಗಿದದ್ದು ಶೇರು ಮಾರುಕಟ್ಟೆಗೆ ಉತ್ತೇಜನ ನೀಡಿತು.