ಮುಂಬಯಿ : ಚೀನದ ಆಮದು ಮೇಲೆ 60 ಶತಕೋಟಿ ಡಾಲರ್ ಸುಂಕ ಹೇರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ರಮದಿಂದಾಗಿ ಈಗಿನ್ನು ಜಾಗತಿಕ ವಾಣಿಜ್ಯ ಸಮರ ಸ್ಫೋಟಗೊಳ್ಳಬಹುದೆಂಬ ಭೀತಿಯಲ್ಲಿ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಬೇಕಾಬಿಟ್ಟಿ ಶೇರುಗಳ ಮಾರಾಟ ನಡೆದಿರುವುದನ್ನು ಅನುಸರಿಸಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 471.44 ಅಂಕಗಳ ಭಾರೀ ಕುಸಿತಕ್ಕೆ ಗುರಿಯಾಗಿ 33,000 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಜಾರಿತು.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಕ 153.45 ಅಂಕಗಳ ನಷ್ಟಕ್ಕೆ ಗುರಿಯಾಗಿ 9,961.30 ಅಂಕಗಳ ಮಟ್ಟಕ್ಕೆ ಕುಸಿಯಿತು.
ಅಮೆರಿಕ ಚೀನೀ ವಸ್ತುಗಳ ಮೇಲೆ ಭಾರೀ ಆಮದು ಸುಂಕ ಹೇರಿರುವುದನ್ನು ಲೆಕ್ಕಿಸಿ ಚೀನ ಕೂಡ ತಾನು ಅಮೆರಿಕನ್ ಉತ್ಪನ್ನಗಳ ಆಮದಿನ ಮೇಲೆ ಬೃಹತ್ ಪ್ರಮಾಣದ ಸುಂಕ ಹೇರುವುದಾಗಿ ಹೇಳಿಕೊಂಡಿದೆ.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್ 412 ಅಂಕಗಳ ನಷ್ಟದೊಂದಿಗೆ 32,594.27 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 132 ಅಂಕಗಳ ನಷ್ಟದೊಂದಿಗೆ 9,982.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ಇನ್‌ಫೋಸಿಸ್, ಮಾರುತಿ ಸುಜುಕಿ, ಎಸ್ ಬ್ಯಾಂಕ್ ಶೇರುಗಳು ಬೆಳಗ್ಗಿನ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದು ಬೆಳಗ್ಗೆ 8 ಪೈಸೆಯಷ್ಟು ಕುಸಿದು 65.19 ರೂ ಮಟ್ಟಕ್ಕೆ ಇಳಿಯಿತು.
ಇಂದು ಬೆಳಗ್ಗಿನ ಶೇರು ವಹಿವಾಟಿನಲ್ಲಿ ಎಸ್ ಬ್ಯಾಂಕ್, ಟಾಟಾ ಸ್ಟೀಲ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಬಜಾಜ್ ಆಟೋ, ಎಕ್ಸಿಸ್ ಬ್ಯಾ,ಕ್, ಟಾಟಾ ಮೋಟರ್, ಹೀರೋ ಮೋಟೋ ಕಾರ್ಪ್, ಲಾರ್ಸನ್ ಶೇರುಗಳು ಶೇ.3.08ರ ಕುಸಿತಕ್ಕೆ ಗುರಿಯಾಗಿ ಆತಂಕ ಮೂಡಿಸಿದವು.