ಮುಂಬಯಿ : ಡಾಲರ್ ಎದುರು ರೂಪಾಯಿ ಇಂದು ಹೊಸ ಸಾರ್ವಕಾಲಿಕ ತಳ ಮಟ್ಟವನ್ನು ಕಂಡಿರುವುದು, ಕಚ್ಚಾ ತೈಲ ಬೆಲೆ ನಿರಂತರ ಏರಿಕೆ ಕಾಣುತ್ತಿರುವುದು, ಜಾಗತಿಕ ವಾಣಿಜ್ಯ ರಂಗದಲ್ಲಿ ಅಸ್ಥಿರತೆ ತಲೆದೋರಿರುವುದು ಇವೇ ಮೊದಲಾದ ಮುಖ್ಯ ಕಾರಣಗಳಿಂದ ಕಂಗೆಟ್ಟಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರ 550.51 ಅಂಕಗಳ ಭಾರೀ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 35,975.63 ಅಂಕಗಳ ಮಟ್ಟದಲ್ಲಿ ಅತ್ಯಂತ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 150 ಅಂಕಗಳ ನಷ್ಟಕ್ಕೆ ಗುರಿಯಾದ ದಿನದ ವಹಿವಾಟನ್ನು 10,858.30 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,818 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,450 ಶೇರುಗಳು ಮುನ್ನಡೆ ಸಾಧಿಸಿದವು, 1,215 ಶೇರುಗಳು ಹಿನ್ನಡೆಗೆ ಗುರಿಯಾದವು; 153 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಬ್ರೆಂಟ್ ಕಚ್ಚಾ ತೈಲ 24 ಸೆಂಟ್ಸ್ ಏರಿದ ಪರಿಣಾಮವಾಗಿ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 85.04 ಡಾಲರ್‌ಗೆ ತಲುಪಿತು. ಡಾಲರ್ ಎದುರು ರೂಪಾಯಿ 72.91 ರೂ ಮಟ್ಟಕ್ಕೆ ಕುಸಿದು ಹೊಸ ಸಾರ್ವಕಾಲಿಕ ತಳಮಟ್ಟಕ್ಕೆ ಜಾರಿತು. ಇವೇ ಎರಡು ವಿದ್ಯಮಾನಗಳು ಇಂದು ಶೇರು ಮಾರುಕಟ್ಟೆಯನ್ನು ತೀವ್ರವಾಗಿ ಅಸ್ಥಿರಗೊಳಿಸಿದವು.
ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಸಮಿತಿಯು ಇದೇ ಅ.3ರಿಂದ 5ರ ವರೆಗೆ ಸಭೆ ನಡೆಸಿ 2018-19ರ ಸಾಲಿನ ನಾಲ್ಕನೇ ದ್ವೆ„ಮಾಸಿಕ ನೀತಿಯನ್ನು ಅ.5ರಂದು ಮಧ್ಯಾಹ್ನ 2.30ರ ವೇಳೆಗೆ ಪ್ರಕಟಿಸಲಿದ್ದು ಶೇರು ಮಾರುಕಟ್ಟೆ ಅದನ್ನು ಕುತೂಹಲದಿಂದ ಎದುರು ನೋಡುತ್ತಿದೆ.