ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ದುರ್ಬಲ ಪ್ರವೃತ್ತಿ ತೋರಿಬಂದಿರುವುದನ್ನು ಅನುಸರಿಸಿರುವ ಮುಂಬಯಿ ಶೇರ ಪೇಟೆ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 156 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಇಂದು ಮಧ್ಯಾಹ್ನದ ಹೊತ್ತಿಗೆ ಹಣದುಬ್ಬರ ಹಾಗೂ ಕೈಗಾರಿಕಾ ಉತ್ಪಾದನೆ ಅಂಕಿ ಅಂಶಗಳ ಬಹಿರಂಗವಾಗಲಿದ್ದು ಅದಕ್ಕೆ ಮುನ್ನವೇ ಲಾಭ ನಗದೀಕರಣ ಮಾಡುವ ಹೂಡಿಕೆದಾರರು ಮತ್ತು ವಹಿವಾಟುದಾರರ ಲೆಕ್ಕಾಚಾರದಲ್ಲಿ ಮುಂಬಯಿ ಶೇರುಗಳ ಮೇಲೆ ತೀವ್ರ ಮಾರಾಟ ಒತ್ತಡ ಹೆಚ್ಚಿದೆ.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 145.16 ಅಂಕಗಳ ನಷ್ಟದೊಂದಿಗೆ 31,166.90 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ 9,622.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ವೇದಾಂತ, ಮಾರುತಿ ಸುಜುಕಿ, ಟಾಟಾ ಸ್ಟೀಲ್, ಮಹೀಂದ್ರ ಆ್ಯಂಡ್ ಮಹೀಂದ್ರ, ಸನ್ ಫಾರ್ಮಾ ಶೇರುಗಳು ಇಂದು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು: ಸನ್ ಫಾರ್ಮಾ, ಗೇಲ್, ಮಹೀಂದ್ರ, ವೇದಾಂತ, ಐಡಿಯಾ ಸೆಲ್ಯುಲರ್. ಟಾಪ್ ಲೂಸರ್‌ಗಳು : ವಿಪ್ರೋ, ಬ್ಯಾಂಕ್ ಆಫ್ ಬರೋಡ, ಅದಾನಿ ಪೋರ್ಟ್, ಟಾಟಾ ಮೋಟರ್ (ಡಿ), ಲಾರ್ಸನ್ ಆ್ಯಂಡ್ ಟೋಬ್ರೋ.
ಜಾಗತಿಕ ಶೇರು ಮಾರುಕಟ್ಟೆಗಳು ಬ್ರಿಟನ್ ಸಂಸತ್ತಿನಲ್ಲಿ ಏರ್ಪಟ್ಟಿರುವ ಅತಂತ್ರ ಸ್ಥಿತಿ ಮತ್ತು ಇದೀಗ ಫ್ರಾನ್ಸ್ ಸಂಸದೀಯ ಚುನಾವಣೆಗಳ ಮೊದಲ ಸುತ್ತಿನ ಮತ ಎಣಿಕೆಯ ಫಲಿತಾಂಶವನ್ನು ಎದುರು ನೋಡುತ್ತಿರುವುದರಿಂದ ಎಚ್ಚರಿಕೆಯ ಹೆಜ್ಜೆ ಇರಿಸುತ್ತಿವೆ ಎಂದು ವಿಶ್ಲೇಷರು ಹೇಳಿದ್ದಾರೆ.