ಮುಂಬಯಿ : ಕಳೆದ ಐದು ದಿನಗಳಿಂದ ನಿರಂತರ ಏರು ಗತಿಯಲ್ಲಿ ಸಾಗಿ ಬಂದು ದಾಖಲೆಗಳನ್ನು ಸೃಷ್ಟಿಸುತ್ತಾ ಬಂದಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ , ಲಾಭ ನಗದೀಕರಣದ ಪರಿಣಾಮವಾಗಿ, 54 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಆದರೆ ಬೆಳಗ್ಗೆ 10.30ರ ಹೊತ್ತಿಗೆ ಪರಿಸ್ಥಿತಿ ಕೊಂಚ ಸುಧಾರಿಸಿದ ಪರಿಣಾಮವಾಗಿ ಸೆನ್ಸೆಕ್ಸ್ 16.76 ಅಂಕಗಳ ಮುನ್ನಡೆಯನ್ನು ಪಡೆದುಕೊಂಡು 36,156.74 ಅಂಕಗಳ ಮಟ್ಟಕ್ಕೆ ಏರುವ ಮೂಲಕ ಲಾಭದ ಹಾದಿಗೆ ತಿರುಗಿದೆ.
ಆದರೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 1 ಅಂಕ ನಷ್ಟದೊಂದಿಗೆ 11,082.70 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಡಾಲರ್ ಎದುರು ರೂಪಾಯಿ ವಿನಿಮಯ ದರ 11 ಪೈಸೆಯಷ್ಟು ಸುಧಾರಿಸಿರುವುದು ಶೇರು ಪೇಟೆಗೆ ಸಮಾಧಾನ ತಂದಿತ್ತು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಇನ್‌ಫೋಸಿಸ್, ಭಾರ್ತಿ ಏರ್‌ಟೆಲ್, ಟಿಸಿಎಸ್, ಎಸ್‌ಬಿಐ, ಮಾರುತಿ ಸುಜುಕಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಇಂದು ಬೆಳಗ್ಗೆ 2,541 ಶೇರುಗಳು ವಹಿವಾಟಿಗೆ ಒಳಪಟ್ಟಿದ್ದವು; 748 ಶೇರುಗಳು ಮುನ್ನಡೆ ಸಾಧಿಸಿದ್ದವು; 1,679 ಶೇರುಗಳು ಹಿನ್ನಡೆಗೆ ಗುರಿಯಾಗಿದ್ದವು; 114 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.