ಮುಂಬಯಿ : ದಿನಪೂರ್ತಿ ಏಳು ಬೀಳುಗಳ ಓಲಾಟದಲ್ಲೇ ತೆವಳಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರ ಕೇವಲ 12.53 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 36,386.61 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಕೇವಲ 1.175 ಅಂಕಗಳ ಮುನ್ನಡೆ ಪಡೆದು ದಿನದ ವಹಿವಾಟನ್ನು 10,906.95 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ಮೊದಲ ಬಾರಿಗೆ 10,000 ಕೋಟಿ ರೂ. ಮೀರಿದ ತ್ತೈಮಾಸಿಕ ಲಾಭವನ್ನು ದಾಖಲಿಸಿರುವ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಶೇರು ಧಾರಣೆ ಇಂದು ಶೇ.4.43ರ ಜಿಗಿತವನ್ನು ದಾಖಲಿಸಿ ಟಾಪ್ ಗೇನರ್ ಎನಿಸಿಕೊಂಡಿತು.
ಉಳಿದಂತೆ ಕೋಟಕ್ ಬ್ಯಾಂಕ್, ಎಚ್‌ಸಿಎಲ್ ಟೆಕ್, ಒಎನ್‌ಜಿಸಿ, ಏಶ್ಯನ್ ಪೇಂಟ್, ವೇದಾಂತ, ಎಚ್ ಡಿ ಎಫ್ ಸಿ ಬ್ಯಾಂಕ್, ಬಜಾಜ್ ಫಿನಾನ್ಸ್, ಮಾರುತಿ ಮತ್ತು ಟಿಸಿಎಸ್ ಶೇರುಗಳು ಶೇ.1.41ರ ಏರಿಕೆಯನ್ನು ದಾಖಲಿಸಿದವು.
ಈ ವಾರ ಸೆನ್ಸೆಕ್ಸ್ 378.77 ಅಂಕಗಳನ್ನು ಸಂಪಾದಿಸಿದೆಯಾದರೆ ನಿಫ್ಟಿ 112 ಅಂಕಗಳ ಏರಿಕೆಯನ್ನು ದಾಖಲಿಸಿದೆ.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,711 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 896 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,650 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 165 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.