ಮುಂಬಯಿ : ದೇಶದ ಸ್ಥೂಲ ಆರ್ಥಿಕಾಭಿವೃದ್ಧಿ ಅಂಕಿ ಅಂಶಗಳು ನಿರೀಕ್ಷೆಗಿಂತ ಉತ್ತಮ ಇರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ನಿರಂತರ ಏಳನೇ ದಿನದ ಮುನ್ನಡೆಯಾಗಿ ಇಂದು ಶುಕ್ರವಾರದ ವಹಿವಾಟನ್ನು 91.52 ಅಂಕಗಳ ಏರಿಕೆಯೊಂದಿಗೆ 34,192.65 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ನಾಳೆ ಶನಿವಾರದಿಂದ ಇನ್‌ಫೋಸಿಸ್ ನೊಂದಿಗೆ ಆರಂಭಗೊಳ್ಳುವ ನಾಲ್ಕನೇ ತ್ತೈಮಾಸಿಕ ಫಲಿತಾಂಶಗಳು ಉತ್ತಮವಾಗಿರುವ ನಿರೀಕ್ಷೆಯಲ್ಲಿ ಶೇರು ಮಾರುಕಟೆಯಲ್ಲಿಂದ ತೇಜಿಯ ವಾತಾವರಣ ನೆಲೆಗೊಂಡಿತ್ತು.
ಕಳೆದ ಫೆ.27ರಂದು ದಾಖಲಾಗಿದ್ದ 34,346.39 ಅಂಕಗಳ ಬಳಿಕದಲ್ಲಿ ಸೆನ್ಸೆಕ್ಸ್ ದಾಖಲಿಸಿರುವ ಅತೀ ದೊಡ್ಡ ದಿನಾಂತ್ಯದ ಮಟ್ಟ ಇಂದಿನದ್ದಾಗಿದೆ.
ಕಳೆದ ಆರು ದಿನಗಳ ನಿರಂತರ ಏರು ಗತಿಯಲ್ಲಿ ಸೆನ್ಸೆಕ್ಸ್ ಒಟ್ಟು 1,082.06 ಅಂಕಗಳನ್ನು ಸಂಪಾದಿಸಿರುವುದು ಗಮನಾರ್ಹವಾಗಿದೆ.
ಇಂದು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 21.95 ಅಂಕಗಳ ಏರಿಕೆಯನ್ನು ದಾಖಲಿಸಿ 10,480.60 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಇಂದು ಶುಕ್ರವಾರ 2,855 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು. 1,285 ಶೇರುಗಳು ಮುನ್ನಡೆ ಕಂಡವು; 1,436 ಶೇರುಗಳು ಹಿನ್ನಡೆಗೆ ಗುರಿಯಾದವು; 134 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.