ಮುಂಬಯಿ : ದಿನಪೂರ್ತಿ ಏಳು ಬೀಳುಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 331.50 ಅಂಕಗಳ ಉತ್ತಮ ಜಿಗಿತದೊಂದಿಗೆ 35,144.49 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 100.39 ಅಂಕಗಳ ಮುನ್ನಡೆಯೊಂದಿಗೆ ದಿನದ ವಹಿವಾಟನ್ನು 10,582.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 425 ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಇಂದು ಸೆನ್ಸೆಕ್ಸ್ ಮುನ್ನಡೆಯಲು ಕಾರಣವಾದ ಮುಖ್ಯ ಸಂಗತಿಗಳೆಂದರೆ ಡಾಲರ್ ಎದುರು ರೂಪಾಯಿ ಚೇತರಿಕೆ, ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ, ವಿದೇಶಿ ಬಂಡವಾಳದ ಹೊಸ ಒಳ ಹರಿವು. ಪರಿಣಾಮವಾಗಿ ಇಂಧನ, ಮೂಲ ಸೌಕರ್ಯ ಮತ್ತು ಬ್ಯಾಂಕಿಂಗ್ ರಂಗದ ಶೇರುಗಳ ಉತ್ತಮ ಖರೀದಿಯನ್ನು ಕಂಡವು.
ಚಿಲ್ಲರೆ ಹಣದುಬ್ಬರ ಒಂದು ವರ್ಷದ ಕನಿಷ್ಠವಾಗಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಶೇ.3.31ಕ್ಕೆ ಇಳಿದದ್ದು ಕೂಡ ಶೇರು ಪೇಟೆಗೆ ಚೈತನ್ಯ ತುಂಬಿತು.
ಡಾಲರ್ ಎದುರು ರೂಪಾಯಿ ಇಂದು 37 ಪೈಸೆಗಳ ಚೇತರಿಕೆಯನ್ನು ಕಂಡು 72.52 ರೂ. ತಲುಪಿದುದು ಕೂಡ ಶೇರು ಮಾರುಕಟ್ಟೆಗೆ ಚೇತೋಹಾರಿಯಾಯಿತು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,760 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು. ಈ ಪೈಕಿ 1,323 ಶೇರುಗಳು ಮುನ್ನಡೆ ಕಂಡವು; 1,293 ಶೇರುಗಳು ಹಿನ್ನಡೆಗೆ ಗುರಿಯಾದವು; 144 ಶೇರುಗಳು ಯಾವುದೇ ಬದಲಾವಣೆಯನ್ನು ಕಾಣಲಿಲ್ಲ.