ಮುಂಬಯಿ : ನಿರಂತರ ನಾಲ್ಕನೇ ದಿನವೂ ತನ್ನ ಏರುಗತಿಯನ್ನು ಕಾಯ್ದುಕೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 231.98 ಅಂಕಗಳ ಜಿಗಿತದೊಂದಿಗೆ 36,250.54 ಅಂಕಗಳ ಮಟ್ಟದಲ್ಲಿ ದೃಢತೆಯೊಂದಿಗೆ ಕೊನೆಗೊಳಿಸಿತು.
ಜಾಗತಿಕ ಶೇರು ಪೇಟೆಗಳಲ್ಲಿ ತೋರಿಬಂದಿರುವ ಧನಾತ್ಮಕತೆ, ಮೂರನೇ ತ್ತೈಮಾಸಿಕ ಫಲಿತಾಂಶಗಳು ಆಶಾದಾಯಕವಾಗಿರುವ ವಿಶ್ವಾಸ ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರಿಂದ ಮುಂಚೂಣಿ ಶೇರುಗಳ ನಿರಂತರ ಖರೀದಿಯೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯಲ್ಲಿ ತೇಜಿ ಕಂಡು ಬಂದಿದೆ.
ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 467 ಅಂಕಗಳನ್ನು ಸಂಪಾದಿಸಿರುವುದು ಗಮನಾರ್ಹವಾಗಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 53 ಅಂಕಗಳ ಏರಿಕೆಯನ್ನು ಕಂಡು ದಿನದ ವಹಿವಾಟನ್ನು 10,855.15 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,747 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,141 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,453 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 153 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.