ಮುಂಬಯಿ : ನಿರಂತರ ಎರಡನೇ ದಿನವೂ ಮುನ್ನಡೆ ಕಾಯ್ದುಕೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು 155.06 ಅಂಕಗಳ ಏರಿಕೆಯೊಂದಿಗೆ ಸೋಮವಾರದ ವಹಿವಾಟನ್ನು 36,076.95 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ಧನಾತ್ಮಕತೆ, ಚೀನ – ಅಮೆರಿಕ ವಾಣಿಜ್ಯ ಸಂಬಂಧ ಸುಧಾರಿಸುವ ನಿರೀಕ್ಷೆ ಮತ್ತು ಅಮೆರಕದ ಫೆಡರಲ್ ರಿಸರ್ವ್ ಬ್ಯಾಂಕಿನ ಎಚ್ಚರಿಕೆಯ ನಡೆಯೇ ಮೊದಲಾದ ಕಾರಣಗಳಿಗೆ ಇಂದು ಮುಂಬಯಿ ಶೇರು ಪೇಟೆಯಲ್ಲಿ ತೇಜಿ ಕಂಡು ಬಂತು. ಕಳೆದ ಶುಕ್ರವಾರದ ವಹಿವಾಟಿನಲ್ಲಿ ಮುಂಬಯಿ ಶೇರು 181 ಅಂಕಗಳ ಏರಿಕೆಯನ್ನು ದಾಖಲಿಸಿತ್ತು.
ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ ಇಂದು 44.45 ಅಂಕಗಳ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,835.95 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಟಿಸಿಎಸ್ ಮತ್ತು ಇನ್‌ಫೋಸಿಸ್ ಇದೇ ಜನವರಿ 10 ಮತ್ತು 11ರಂದು ಅನುಕ್ರಮವಾಗಿ ತಮ್ಮ ಮೂರನೇ ತ್ತೈಮಾಸಿಕ ಫಲಿತಾಂಶ ಪ್ರಕಟಿಸಲಿದ್ದು ಅದರ ಮೇಲೆ ಮುಂಬಯಿ ಶೇರು ಪೇಟೆಯ ಕಣ್ಣು ನೆಟ್ಟಿರುವುದು ಇಂದಿನ ತೇಜಿಯಲ್ಲಿ ವ್ಯಕ್ತವಾಗಿದೆ.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,804 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,314 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,287 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 203 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.