ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ ಸೂಚ್ಯಂಕ ಇಂದು ಬುಧವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಅಧಿಕ ಅಂಕಗಳ ಜಿಗಿತವನ್ನು, ನಿರಂತರ ಎರಡನೇ ದಿನದ ಮುನ್ನಡೆಯಾಗಿ, ದಾಖಲಿಸಿತು.
ದೇಶದ ವಾಣಿಜ್ಯ ಕೊರತೆ ಕಳೆದ 10 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿರುವುದಾಗಿ ಸರಕಾರ ಪ್ರಕಟಿಸಿದ್ದೇ ಮುಂಬಯಿ ಶೇರು ಪೇಟೆಯಲ್ಲಿನ ತೇಜಿಗೆ ಕಾರಣವಾಯಿತು. ಅಂತೆಯೇ ದೇಶೀಯ ಹೂಡಿಕೆದಾರ ಸಂಸ್ಥೆಗಳು ಭರಾಟೆಯ ಶೇರು ಖರೀದಿಯಲ್ಲಿ ತೊಡಗಿದುದು ಕೂಡ ತೇಜಿಗೆ ಇನ್ನಷು ಇಂಬು ನೀಡಿತು.
ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 74.11 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 36,392.44 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 20.40 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,907.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 13 ಪೈಸೆಗಳ ಏರಿಕೆಯನ್ನು ದಾಖಲಿಸಿ 70.92 ರೂ.ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಮುಂಬಯಿ ಶೇರು ಪೇಟೆಯಲ್ಲಿ ಇಂದಿನ ಆರಂಭಿಕ ವಹಿವಾಟನಲ್ಲಿ ಝೀ ಎಂಟರ್‌ಟೇನ್‌ಮೆಂಟ್, ಎಸ್ ಬ್ಯಾಂಕ್, ಇನ್‌ಫೋಸಿಸ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.