ಮುಂಬಯಿ : ಕಳೆದ ಆರು ದಿನಗಳಿಂದ ನಿರಂತರ ಗೆಲುವಿನ ಓಟ ನಡೆಸಿಕೊಂಡು ಬಂದಿದ್ದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ 100ಕ್ಕೂ ಹೆಚ್ಚು ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ತೋರಿ ಬಂದ ದೌರ್ಬಲ್ಯ, ವಿದೇಶಿ ಬಂಡವಾಳದ ಹೊರ ಹರಿವು, ಸಾಮಾನ್ಯ ಎನ್ನಬಹುದಾದ ಕಂಪೆನಿಗಳ ಜೂನ್ ತ್ತೈಮಾಸಿಕ ಫಲಿತಾಂಶ ಇವೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಮಾರುಕಟ್ಟೆ ಇಂದು ಹಿನ್ನಡೆಗೆ ಗುರಿಯಾಯಿತು.
ಇಂದು ಪ್ರಕಟಿಸುವ ತನ್ನ ದ್ವೆ„ಮಾಸಿಕ ಹಣಕಾಸು ನೀತಿಯಲ್ಲಿ ಆರ್‌ಬಿಐ ತನ್ನ ಬಡ್ಡಿ ದರವನ್ನು ಯಥಾವತ್ ಉಳಿಸಿಕೊಳ್ಳುವುದೆಂಬ ಗ್ರಹಿಕೆಯಲ್ಲಿ ಮುಂಬಯಿ ಶೇರು ಪೇಟೆ ಇಂದು ಎಚ್ಚರಿಕೆ ನಡೆ ತೋರುತ್ತಿದೆ.
ಇಂದು ಬೆಳಗ್ಗೆ 11.30ರ ಹೊತ್ತಿಗೆ ಸೆನ್ಸೆಕ್ಸ್ 129.39 ಅಂಕಗಳ ನಷ್ಟದೊಂದಿಗೆ 37,365.01 ಅಂಕಗಳ ಮಟ್ಟದಲ್ಲೂ , ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 32.30 ಅಂಕಗಳ ನಷ್ಟದೊಂದಿಗೆ 11,287.20 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಎಕ್ಸಿಸ್ ಬ್ಯಾಂಕ್, ಎಸ್‌ಬಿಐ, ಟೆಕ್ ಮಹೀಂದ್ರ, ರಿಲಯನ್ಸ್, ಐಸಿಐಸಿಐ ಬ್ಯಾಂಕ್ ಶೇರುಗಳು ಇಂದು ಹೆಚ್ಚು ಕ್ರಿಯಾಶೀಲವಾಗಿದ್ದವು.
ಡಾಲರ್ ಎದುರು ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ರೂಪಾಯಿ 2 ಪೈಸೆಯಷ್ಟು ಕುಸಿದು 68.69 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.