ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ದುರ್ಬಲ ಪ್ರವೃತ್ತಿಯನ್ನು ಅನುಸರಿಸಿ ದಿನಪೂರ್ತಿ ಏಳು ಬೀಳುಗಳನ್ನು ಕಾಣುತ್ತಾ ಸಾಗಿದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು ಕೇವಲ 8.18 ಅಂಕಗಳ ಮುನ್ನಡೆಯೊಂದಿಗೆ 35,216.32 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ಕಳೆದ ಎರಡು ದಿನಗಳ ನಿರಂತರ ಏರುಗತಿಯಲ್ಲಿ ಒಟ್ಟು 292.76 ಅಂಕಗಳನ್ನು ಸಂಪಾದಿಸಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆ ಕೇವಲ 2.30 ಅಂಕಗಳ ಮುನ್ನೆಯನ್ನು ಉಳಿಸಿಕೊಂಡು ದಿನದ ವಹಿವಾಟನ್ನು 10,717.80 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ನಿನ್ನೆ ಸೋಮವಾರದ ವಹಿವಾಟಿನಲ್ಲಿ ದೇಶೀಯ ಸಾಂಸ್ಥಿಕ ಹೂಡಿಕೆದಾರರು 1,037.23 ಕೋಟಿ ರೂ. ಮೌಲ್ಯದ ಶೇರುಗಳನ್ನು ಖರೀದಿಸಿದರು. ಆದರೆ ವಿದೇಶಿ ಹೂಡಿಕೆದಾರರು 635.24 ಕೋಟಿ ರೂ. ಶೇರುಗಳನ್ನು ಮಾರಿದರು.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,810 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು; 1,173 ಶೇರುಗಳು ಮುನ್ನಡೆ ಕಂಡವು; 1,506 ಶೇರಗಳು ಹಿನ್ನಡೆಗೆ ಗುರಿಯಾದವು; 131 ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.