ಮುಂಬಯಿ : ಈ ವರೆಗಿನ ಜೂನ್ ಅಂತ್ಯದ ತ್ತೈಮಾಸಿಕ ಫಲಿತಾಂಶಗಳು ಆಶಾದಾಯಕವಾಗಿರುವ ಕಾರಣ ಮತ್ತು ಭವಿಷ್ಯದಲ್ಲಿ ಅದನ್ನೇ ಹಾರೈಸುತ್ತಿರುವ ಮುಂಬಯಿ ಶೇರು ಪೇಟೆ ಇಂದು ಸೋಮವಾರದ ವಹಿವಾಟನ್ನು 216.98 ಅಂಕಗಳ ಉತ್ತಮ ಮುನ್ನಡೆಯೊಂದಿಗೆ ಹೊಸ ವಿಶ್ವಾಸದೊಂದಿಗೆ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 51.15 ಅಂಕಗಳ ಏರಿಕೆಯೊಂದಿಗೆ 9,966.40 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಸಮಾಪನಗೊಳಿಸಿತು.
ನಿಫ್ಟಿ ಈಗಿನ್ನು 10,000 ಅಂಕಗಳ ಐತಿಹಾಸಿಕ ಮಟ್ಟದ ಸೀಮೋಲ್ಲಂಘನೆಗೆ ಕೇವಲ 35 ಅಂಕ ದೂರವಿದ್ದು ಇದನ್ನು ಸಾಧಿಸಿಯೇ ತೀರುವ ಹೊಸ ಆತ್ಮವಿಶ್ವಾಸ ಈಗ ಮಾರುಕಟ್ಟೆಯಲ್ಲಿ ತುಂಬಿ ತುಳುಕುತ್ತಿರುವುದು ನಿಚ್ಚಳವಿದೆ.
ಇಂದಿನ ವಹಿವಾಟಿನಲ್ಲಿ ಟಾಟಾ ಸ್ಪಂಜ್, ಐಐಎಫ್ಎಲ್ ಹೋಲ್ಡಿಂಗ್ಸ್, ಕ್ವೆಸ್ ಕಾರ್ಪ್, ಜೆ ಆ್ಯಂಡ್ ಕೆ ಬ್ಯಾಂಕ್, ಜಿವಿಕೆ ಪವರ್, ಅವೆನ್ಯೂ ಸೂಪರ್‌ಮಾರ್ಟ್, ಆಮ್‌ಟೆಕ್ ಆಟೋ, ಫೋರ್ಟಿಸ್ ಹೆಲ್ತ್ ಕೇರ್, ಎಚ್‌ಪಿಸಿಎಲ್ ಮತ್ತು ವಿಜಯ ಬ್ಯಾಂಕ್ ಶೇರುಗಳು ಶೇ.8ರಷ್ಟು ಏರಿರುವುದು ವಿಶೇಷವೆನಿಸಿತು.
ಇಂದು ವಹಿವಾಟಿಗೆ ಒಳಪಟ್ಟ ಶೇರುಗಳ ಪೈಕಿ 1,332 ಶೇರುಗಳು ಮುನ್ನಡೆ ಸಾಧಿಸಿದರೆ 1,388 ಶೇರುಗಳ ಹಿನ್ನಡೆಗೆ ಗುರಿಯಾದವು; 173 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಭಾರ್ತಿ ಏರ್‌ಟೆಲ್, ರಿಲಯನ್ಸ್, ವಿಪ್ರೋ ಶೇರುಗಳು ಟಾಪ್ ಗೇನರ್‌ಗಳಲ್ಲಿ ವಿಜೃಂಭಿಸಿದವು; ಡಾ. ರೆಡ್ಡಿ, ಎಕ್ಸಿಸ್ ಬ್ಯಾಂಕ್, ವೇದಾಂತ ಟಾಪ್ ಲೂಸರ್‌ಗಳಲ್ಲಿ ಕಾಣಿಸಿಕೊಂಡವು.
ಆರೋಗ್ಯ ರಂಗದ ದಿವೀಸ್ ಲ್ಯಾಬೋರೇಟರೀಸ್ ಇಂದು ಶೇ.5.6 ಪ್ರಮಾಣದಲ್ಲಿ ಧರೆಗುರುಳಿದ್ದುದು ವಿಶೇಷವೆನಿಸಿತು. ಕಂಪೆನಿಯ ಜೂನ್ ಅಂತ್ಯದ ತ್ತೈಮಾಸಿಕ ಫಲಿತಾಂಶ ನಿರಾಶಾದಾಯಕವಾಗಿದ್ದುದೇ ಇದಕ್ಕೆ ಕಾರಣವಾಯಿತು.