ಮುಂಬಯಿ : ಅಮೆರಿಕದ ವಾಲ್ ಸ್ಟ್ರೀಟ್ ನಿನ್ನೆಯ ವಹಿವಾಟಿನಲ್ಲಿ 1,000ಕ್ಕೂ ಹೆಚ್ಚು ಅಂಕಗಳನ್ನು ಕಳೆದು ಕೊಂಡದ್ದನ್ನು ಅನುಸರಿಸಿ ಏಶ್ಯನ್ ಶೇರುಮಾರುಕಟ್ಟೆಗಳು ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಭಾರೀ ಕುಸಿತವನ್ನು ಅನುಭವಿಸಿವೆ. ಅಮೆರಿಕ ಶೇರು ಮಾರುಕಟ್ಟೆಯ ಕುಸಿತ ವಿಶ್ವದ ಎಲ್ಲ ಶೇರು ಮಾರುಕಟ್ಟೆಗಳ ಮೇಲೆ ಪರಿಣಾಮವನ್ನು ಬೀರಿದೆ.
ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 564 ಅಂಕಗಳ ನಷ್ಟಕ್ಕೆ ಗುರಿಯಾಯಿತು. ಬ್ಯಾಂಕ್, ಐಟಿ ಸೇರಿದಂತೆ ಬಹುತೇಕ ಎಲ್ಲ ರಂಗದ ಶೇರುಗಳು ತೀವ್ರ ಮಾರಾಟ ಒತ್ತಡವನ್ನು ಅನುಭವಿಸಿದವು.
ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ 453.83 ಅಂಕಗಳ ನಷ್ಟದೊಂದಿಗೆ 33,959.33 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 141.60 ಅಂಕಗಳ ನಷ್ಟದೊಂದಿಗೆ 10,435.30 ಅಂಕಗಳ ಮಟ್ಟದಲ್ಲೂ ವಹಿವಾಟು ನಿರತವಾಗಿದ್ದವು.
ಟಾಟಾ ಸ್ಟೀಲ್, ಐಟಿಸಿ, ರಿಲಯನ್ಸ್, ಎಸ್‌ಬಿಐ, ಮಾರುತಿ ಸುಜುಕಿ ಶೇರುಗಳು ಇಂದು ಅತ್ಯಂತ ಕ್ರಿಯಾಶೀಲವಾಗಿದ್ದವು.
ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಇಂದು ಬೆಳಗ್ಗೆ ಶೇ.3.9ರ ಕುಸಿತಕ್ಕೆ ಗುರಿಯಾಯಿತು. ಶಾಂಘೈ ಕಾಂಪೋಸಿಟ್ ಸೂಚ್ಯಂಕ 4.24ರ ಕುಸಿತಕ್ಕೆ ಗುರಿಯಾಯಿತು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಇನ್‌ಪೋಸಿಸ್, ಟಿಸಿಎಸ್, ರಿಲಯನ್ಸ್, ಎಚ್ ಡಿ ಎಫ್ ಸಿ ಬ್ಯಾಂಕ್ ಕೋಟಕ್ ಬ್ಯಾಂಕ್, ಹಿಂದುಸ್ಥಾನ ಯುನಿಲಿವರ್, ಭಾರ್ತಿ ಏರ್‌ಟೆಲ್ ಶೇರುಗಳು ಶೇ.1.5ರ ಕುಸಿತವನ್ನು ಅನುಭವಿಸಿದವು.