ಮುಂಬಯಿ : ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರುತ್ತಿರುವುದು ದೇಶದ ವಿತ್ತೀಯ ಕೊರತೆಯ ಮೇಲೆ ದುಷ್ಪರಿಣಾಮ ಬೀರಬಹುದಲ್ಲದೆ ತೈಲ ಅವಲಂಬಿತ ಕಂಪೆನಿಗಳ ಕಚ್ಚಾ ವಸ್ತು ವೆಚ್ಚವೂ ಏರಬಹುದೆಂಬ ಕಳವಳ ಮುಂಬಯಿ ಶೇರು ಪೇಟೆಯನ್ನು ಇಂದು ತೀವ್ರವಾಗಿ ಆವರಿಸಿಕೊಂಡಿತು.
ಪರಿಣಾಮವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 360.43 ಅಂಕಗಳ ಭಾರೀ ಕುಸಿತಕ್ಕೆ ಗುರಿಯಾಗಿ 33,370.76 ಅಂಕಗಳ ಮಟ್ಟಕ್ಕೆ ಕುಸಿಯುವುದರೊಂದಿಗೆ ದಿನದ ವಹಿವಾಟನ್ನು ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 101.60 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,350.20 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದು ವಹಿವಾಟಿಗೆ ಶೇರುಗಳ ಪೈಕಿ 1,869 ಶೇರುಗಳು ಹಿನ್ನಡೆಗೆ ಗುರಿಯಾದವು; 877 ಶೇರುಗಳು ಮಾತ್ರವೇ ಮುನ್ನಡೆ ಸಾಧಿಸಿದವು.
ನಿಫ್ಟಿ, ಫಾರ್ಮಾ, ಮೆಟಲ್ ಮತ್ತು ಪಿಎಸ್‌ಯು ಬ್ಯಾಂಕ್ ಸೂಚ್ಯಂಕಗಳು ಶೇ.2ರಿಂದ ಶೇ.5ರಷ್ಟು ಕುಸಿದವು. ಐಟಿ ಸೂಚ್ಯಂಕ ಶೇ.2ರ ಏರಿಕೆಯನ್ನು ದಾಖಲಿಸಿತು.