ಮುಂಬಯಿ : ಎಸ್ ಆ್ಯಂಡ್ ಪಿ ರೇಟಿಂಗ್ ಸಂಸ್ಥೆಯ ಭಾರತದ ಆರ್ಥಿಕ ಸದೃಢತೆಯ ರೇಟಿಂಗನ್ನು ಯಥಾವತ್ ಉಳಿಸಿಕೊಂಡಿರುವುದಕ್ಕೆ ನಿರಾಶೆಗೊಂಡಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಬೆಳಗ್ಗಿನ ವಹಿವಾಟಿನಲ್ಲಿ, ಕಳೆದ ಏಳು ದಿನಗಳ ನಿರಂತರ ಗೆಲುವಿನ ಓಟಕ್ಕೆ ಬ್ರೇಕ್ ಪಡೆದು 107 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ನಿರುತ್ತೇಜದ ವಾತಾವರಣ ನೆಲೆಯಾಗಿರುವುದನ್ನು ಗಮನಿಸಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಸೋಮವಾರ ಬೆಳಗ್ಗೆ 11 ಗಂಟೆಯ ಹೊತ್ತಿಗೆ 68.32 ಅಂಕಗಳ ನಷ್ಟದಲ್ಲಿ 33,610.92 ಅಂಕಗಳ ಮಟ್ಟದಲ್ಲೂ ನಿಫ್ಟಿ ಸೂಚ್ಯಂಕ 30.80 ಅಂಕಗಳ ನಷ್ಟದೊಂದಿಗೆ 10,358.90 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಎಕ್ಸಿಸ್ ಬ್ಯಾಂಕ್, ರಿಲಯನ್ಸ್, ಎಸ್‌ಬಿಐ, ಸನ್ ಫಾರ್ಮಾ ಮತ್ತು ಇನ್‌ಫೋಸಿಸ್ ಶೇರುಗಳು ಸಕ್ರಿಯವಾಗಿದ್ದವು.
ಇಂದು ಐಟಿ, ಬ್ಯಾಂಕಿಂಗ್, ತೈಲ ಮತ್ತು ಅನಿಲ ಹಾಗೂ ಎಫ್ಎಂಸಿಜಿ ರಂಗದ ಶೇರುಗಳು ಮಾರಾಟದ ಒತ್ತಡಕ್ಕೆ ಗುರಿಯಾದವು.
ಆದರೆ ಒಎನ್‌ಜಿಸಿ, ಎಲ್ ಆ್ಯಂಡ್ ಟಿ, ಲೂಪಿನ್, ಐಸಿಐಸಿಐ ಬ್ಯಾಂಕ್ ಶೇರುಗಳು ಮುನ್ನಡೆ ಸಾಧಿಸುವಲ್ಲಿ ಸಫಲವಾದವು.
ಇಂದು ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.0.37, ಶಾಂಘೈ ಸೂಚ್ಯಂಕ ಶೇ.0.79 ಮತ್ತು ಜಪಾನಿನ ನಿಕ್ಕಿ ಶೇ. 0.34ರ ಕುಸಿತಕ್ಕೆ ಗುರಿಯಾದವು.