ಮುಂಬಯಿ : ನಾಲ್ಕು ದಿನಗಳ ನಿರಂತರ ಲಾಭದ ಹಾದಿಯಲ್ಲಿ ಸಾಗಿ ಬಂದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 106.41 ಅಂಕಗಳ ನಷ್ಟದೊಂದಿಗೆ 36,106.50 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಏಶ್ಯದ ಇತರ ಶೇರು ಮಾರುಕಟ್ಟೆಗಳಲ್ಲಿ ತೋರಿಬಂದ ನೇತ್ಯಾತ್ಮಕತೆಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯಲ್ಲಿಂದು ಬ್ಯಾಂಕಿಂಗ್ ಶೇರುಗಳ ವ್ಯಾಪಕ ಮಾರಾಟ ನಡೆದದ್ದೇ ಸೆನ್ಸೆಕ್ಸ್ ಸೋಲಿಗೆ ಕಾರಣವಾಯಿತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದು 33.55 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,821.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಇಂಡಸ್‌ಇಂಡ್ ಬ್ಯಾಂಕ್, ಕೋಟಕ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಮತ್ತು ಎಸ್‌ಬಿಐ ಶೇರುಗಳು ಶೇ.2.36ರ ಹಿನ್ನಡೆಗೆ ಗುರಿಯಾದವು. ಐಟಿ ಕ್ಷೇತ್ರದ ದಿಗ್ಗಜ ಟಿಸಿಎಸ್ ಶೇರು ಇಂದು, 3ನೇ ತ್ತೈಮಾಸಿಕ ಫಲಿತಾಂಶ ಪ್ರಕಟನೆಗೆ ಮುನ್ನವೇ, ಶೇ.0.25ರ ಕುಸಿತಕ್ಕೆ ಗುರಿಯಾಯಿತು.
ಡಾಲರ್ ಎದುರು ರೂಪಾಯಿ ಇಂದು 10 ಪೈಸೆಯ ನಷ್ಟಕ್ಕೆ ಗುರಿಯಾಗಿ 70.56 ರೂ. ಮಟ್ಟಕ್ಕೆ ಇಳಿಯಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,754 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,227 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,373 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 154 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.