ಮುಂಬಯಿ : ಐರೋಪ್ಯ ಹಾಗೂ ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿನ ದೌರ್ಬಲ್ಯ, ಜಿಎಸ್‌ಟಿ ಅನುಷ್ಠಾನದ ಸಾಧಕ-ಬಾಧಕದ ಚಿಂತೆ ಇತ್ಯಾದಿಗಳ ಕಾರಣಗಳಿಂದಾಗಿ ಹೂಡಿಕೆದಾರರು ಹಾಗೂ ವಹಿವಾಟುದಾರರು ಲಾಭನಗದೀಕರಣಕ್ಕೆ ಮುಂದಾದ ಪ್ರಯುಕ್ತ ಇಂದು ಶುಕ್ರವಾರ ಮುಂಬಯಿ ಶೇರು ಪೇಟೆ 152 ಅಂಕಗಳ ಕುಸಿತವನ್ನು ಕಂಡಿತು.
ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 152.53 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 31,138.21 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಪ್ಟಿ ಸೂಚ್ಯಂಕ 55.05 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 9,574.95 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಪವರ್ ಗ್ರಿಡ್, ವೇದಾಂತ, ಸನ್ ಫಾರ್ಮಾ, ಅರಬಿಂದೋ ಫಾರ್ಮಾ, ಐಸಿಐಸಿಐ ಬ್ಯಾಂಕ್ ಟಾಪ್ ಗೇನರ್ ಎನಿಸಿಕೊಂಡವು.
ಇದಕ್ಕೆ ವ್ಯತಿರಿಕ್ತವಾಗಿ ಬ್ಯಾಂಕ್ ಆಫ್ ಬರೋಡ, ಟಾಟಾ ಮೋಟರ್, ಬಾಶ್, ಹೀರೋ ಮೋಟೋ ಕಾರ್ಪ್ ಟಾಪ್ ಲೂಸರ್ ಎನಿಸಿಕೊಂಡವು.
ಪ್ರತಿಯೊಂದು ಏರಿದ ಶೇರಿಗೆ ವಿರುದ್ದವಾಗಿ ಮೂರು ಶೇರುಗಳು ಕುಸಿಯುವ ಮೂಲಕ ಒಟ್ಟಾರೆ ಮಾರುಕಟ್ಟೆಯಲ್ಲಿ ದೌರ್ಬಲ್ಯದ ಪ್ರವೃತ್ತಿ ಗೋಚರವಾಯಿತು.