ಮುಂಬಯಿ : ಅಸ್ಥಿರತೆಯ ಕಾರಣ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಎಗ್ಗಿಲ್ಲದ ಮಾರಾಟ ಕಂಡು ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಮಾರುಕಟ್ಟೆ ಇಂದು ಗುರುವಾರ 759.74 ಅಂಕಗಳ ಭಾರೀ ನಷ್ಟದೊಂದಿಗೆ 34,001.15 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು. ಈ ವರ್ಷ ಎಪ್ರಿಲ್ 11ರ ಬಳಿಕ ದಾಖಲಾಗಿರುವ ಸೆನ್ಸೆಕ್ಸ್ ನ ನಿಕೃಷ್ಟ ಮಟ್ಟ ಇಂದಿನದ್ದಾಗಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 225.45 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,234.65 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ನಿನ್ನೆಯ ವಹಿವಾಟಿನಲ್ಲಿ 461.42 ಅಂಕಗಳನ್ನು ಸಂಪಾದಿಸಿತ್ತು. ಅಮೆರಿಕದ ಫೆಡರಲ್ ರಿವರ್ಸ್ ಬ್ಯಾಂಕ್ ಬಡ್ಡಿ ದರ ಪರಿಷ್ಕರಿಸಿರುವುದು ಮತ್ತು ಅದರ ಈ ನೀತಿಯನ್ನು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿರುವುದು ಅಮೆರಿಕ ಸಹಿತ ಎಲ್ಲ ಪ್ರಮುಖ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ತಲ್ಲಣಕ್ಕೆ ಕಾರಣವಾಗಿದೆ.
ಇದೇ ವೇಳೆ ಚೀನ ಶೇರು ಮಾರಕಟ್ಟೆ ಇಂದು ಕಳೆದ ನಾಲ್ಕು ವರ್ಷಗಳ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಚೀನದ ಸುಮಾರು 1,000 ಕಂಪೆನಿಗಳ ಶೇರು ಧಾರಣೆ ದಿನದ ಶೇ.10ರ ಕುಸಿತದ ಮಿತಿಯನ್ನು ತಲುಪಿವೆ. ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ಭಾರೀ ಕುಸಿತ, ಅಮೆರಿಕ – ಚೀನ ನಡುವಿನ ವಾಣಿಜ್ಯ ಸಮರ ಮುಂತಾಗಿ ಹಲವು ಕಾರಣಗಳಿಂದ ಚೀನೀ ಶೇರು ಮಾರುಕಟ್ಟೆ ಕುಸಿದಿದೆ ಎಂದು ವರದಿಗಳು ತಿಳಿಸಿವೆ.
ಅಮೆರಿಕದ ಫೆಡ್ ರೇಟ್ ಏರಿರುವ ಕಾರಣ ಉದಯೋನ್ಮುಖ ಆರ್ಥಿಕ ರಾಷ್ಟ್ರಗಳಿಂದ ಬಂಡವಾಳದ ಹೊರ ಹರಿವು ಹೆಚ್ಚುವ ಭೀತಿ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,731 ಕಂಪೆನಿಗಳ ಶೇರುಗಳು ವಹಿವಾಟಿಗೆ ಒಳಪಟ್ಟವು. ಈ ಪೈಕಿ 819 ಶೇರುಗಳು ಮುನ್ನಡೆ ಕಂಡವು; 1,765 ಶೇರುಗಳು ಹಿನ್ನಡೆಗೆ ಗುರಿಯಾದವು; 147 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.
ಇಂದಿನ ವಹಿವಾಟಿನಲ್ಲಿ ಟಿಸಿಎಸ್ ಶೇರು ಶೇ.3.10ರ ಕುಸಿತವನ್ನು ಕಂಡಿತು. ಉಳಿದಂತೆ ವೇದಾಂತ, ಮಹೀಂದ್ರ, ಇನ್‌ಫೋಸಿಸ್, ಅದಾನಿ ಪೋರ್ಟ್, ಭಾರ್ತಿ ಏರ್‌ಟೆಲ್, ಟಾಟಾ ಮೋಟರ್, ಎಚ್ ಡಿ ಎಫ್ ಸಿ ಶೇರುಗಳು ಶೇ.4.45ರ ಕುಸಿತಕ್ಕೆ ಗುರಿಯಾದವು.